ಉಡುಪಿ: ಮಂಗಳೂರು ತಾಲೂಕಿನ ಕಟೀಲಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಲು ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಮುಂಬಯಿ ಸಂಜೀವಿನಿ ಚಾರಿಟೆಬಲ್ ಟ್ರಸ್ಟ್ ಬುಧವಾರ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿವೆ. ಆಸ್ಪತ್ರೆಗೆ ಕಟೀಲು ಸಂಜೀವಿನಿ ಆಸ್ಪತ್ರೆ ಎಂದು ಹೆಸರಿಡಲಾಗುವುದು.
ಆಸ್ಪತ್ರೆಯನ್ನು ಆರ್ಥಿಕವಾಗಿ ಹಿಂದುಳಿದವರಿಗಾಗಿ ಟ್ರಸ್ಟ್ ನಿರ್ಮಿಸಿಕೊಡಲಿದೆ. ಮಣಿಪಾಲ ವಿ.ವಿ. ಆಸ್ಪತ್ರೆ ನಡೆಸಲಿದೆ.
ಒಪ್ಪಂದದ ಪ್ರಕಾರ 9 ಜನರ ಸಲಹಾ ಮಂಡಳಿ ಇರುತ್ತದೆ. ಇಬ್ಬರು ಟ್ರಸ್ಟ್ ವತಿಯಿಂದ, ಐವರು ವಿ.ವಿ. ಕಡೆಯಿಂದ, ಒಬ್ಬರು ಕಟೀಲು ದೇವಸ್ಥಾನದ ವತಿಯಿಂದ, ಇನ್ನೊಬ್ಬರು ಸ್ಥಳೀಯ ಗಣ್ಯರು ಇರುತ್ತಾರೆ. ತಿಳಿವಳಿಕೆ ಪತ್ರಕ್ಕೆ ವಿ.ವಿ. ಕುಲಸಚಿವ ಡಾ| ನಾರಾಯಣ ಸಭಾಹಿತ್, ಟ್ರಸ್ಟ್‌ನ ಟ್ರಸ್ಟಿ ಡಾ| ಸುರೇಶ ರಾವ್ ಸಹಿ ಮಾಡಿದರು.
ಆಸ್ಪತ್ರೆ ನಿರ್ಮಾಣ ಕಾಮಗಾರಿಯು ಸುಮಾರು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.
ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಡಾ| ಎಚ್. ವಿನೋದ ಭಟ್, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಮಣಿಪಾಲದ ಡಾ| ಎಂ. ದಯಾನಂದ, ಮಂಗಳೂರಿನ ಡಾ| ಆನಂದ ವೇಣುಗೋಪಾಲ್, ಮಂಗಳೂರು ಕೆಎಂಸಿ ಸಹಡೀನ್ ಡಾ| ಬಿ. ಉಣ್ಣಿಕೃಷ್ಣನ್, ಸಾಮಾನ್ಯ ಸೇವೆಗಳ ನಿರ್ದೇಶಕ ಬದರಿನಾರಾಯಣ್, ಯೋಜನೆಯ ರವಿರಾಜ್, ಕಿಶೋರ್ ಎಲ್. ಕಾಮತ್, ದೇವಸ್ಥಾನ, ಟ್ರಸ್ಟ್ ಕಡೆಯಿಂದ ಹರಿನಾರಾಯಣದಾಸ ಆಸ್ರಣ್ಣ, ಟ್ರಸ್ಟಿ ಕೆ. ರವೀಂದ್ರನಾಥ ಪೂಂಜ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English