ಜಿಎಸ್‌ಟಿ ಅನುಷ್ಠಾನದಿಂದ ಕರ್ನಾಟಕ ರಾಜ್ಯದ ಆದಾಯ ಹೆಚ್ಚಳ: ಮಧುಕರ್‌ ಹಿರೇಗಂಗೆ

11:01 AM, Saturday, December 3rd, 2016
Share
1 Star2 Stars3 Stars4 Stars5 Stars
(No Ratings Yet)
Loading...

GSTಮಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನದಿಂದ ಕರ್ನಾಟಕ ರಾಜ್ಯದ ಆದಾಯದಲ್ಲಿ ಸುಮಾರು 11,000 ಕೋ.ರೂ. ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಆಕೌಂಟೆಂಟ್‌ ಆಫ್‌ ಇಂಡಿಯಾದ (ಐಸಿಎಐ) ಪರೋಕ್ಷ ತೆರಿಗೆಗಳ ಸಮಿತಿಯ ಅಧ್ಯಕ್ಷ ಮಧುಕರ್‌ ಹಿರೇಗಂಗೆ ಅವರು ಹೇಳಿದರು.

ಪರೋಕ್ಷ ತೆರಿಗೆಗಳ ಸಮಿತಿಯು ಐಸಿಎಐಯ ದಕ್ಷಿಣ ಭಾರತ ವಲಯದ ಮಂಗಳೂರು ಶಾಖೆಯ ಸಹಯೋಗದೊಂದಿಗೆ ಜಿಎಸ್‌ಟಿ ಕುರಿತು ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮಾವೇಶದ ಉದ್ಘಾಟನ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಎಸ್‌ಟಿಯಿಂದ ತೆರಿಗೆ ವ್ಯವಸ್ಥೆ ಮತ್ತು ಸ್ವರೂಪದಲ್ಲಿ ಮಹತ್ತರ ಸುಧಾರಣೆಗಳಾಗುತ್ತವೆ. ಇದರಿಂದ ರಾಜ್ಯಕ್ಕೆ ಲಾಭವಾಗಲಿದೆ ಎಂದರು.

ಜಿಎಸ್‌ಟಿ ಉತ್ಪನ್ನ ರಾಜ್ಯಗಳಂತೆ ಗ್ರಾಹಕ ರಾಜ್ಯಗಳಿಗೂ ಹೆಚ್ಚು ಆದಾಯ ಕ್ರೋಡೀಕರಣಕ್ಕೆ ಪೂರಕವಾಗಲಿದೆ. ಅಸ್ಸಾಂ, ಪಶ್ಚಿಮ ಬಂಗಾಲ, ಕೇರಳ ಮುಂತಾದ ಗ್ರಾಹಕ ರಾಜ್ಯಗಳಿಗೆ ಇನ್ನು ಮುಂದೆ ಹೆಚ್ಚು ಆದಾಯ ತರಲಿದೆ. ಇತರ ವಿಷಯಗಳಿಗೆ ತಗಾದೆ ತೆಗೆಯುವ ಜಮ್ಮು ಮತ್ತು ಕಾಶ್ಮೀರ ಕೂಡ ಜಿಎಸ್‌ಟಿಯನ್ನು ಅಂಗೀಕರಿಸಿದೆ ಎಂದರು.

ಜಿಎಸ್‌ಟಿ ತೆರಿಗೆ ವ್ಯವಸ್ಥೆ ಪ್ರಕ್ರಿಯೆಯಲ್ಲಿ ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಆಕೌಂಟೆಂಟ್‌ ಆಫ್‌ ಇಂಡಿಯಾ ಆರಂಭದಿಂದಲೂ ಸಕ್ರಿಯ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿದೆ. ತೆರಿಗೆ ವ್ಯವಸ್ಥೆ, ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಕ್ರಮ, ಉಪನ್ಯಾಸ, ತರಬೇತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ.

ಪರೋಕ್ಷ ತೆರಿಗೆಗಳ ಸಮಿತಿ ಹಾಗೂ ಐಸಿಎಐಯ ದಕ್ಷಿಣ ಭಾರತ ವಲಯದ ಮಂಗಳೂರು ಶಾಖೆಯ ಆಶ್ರಯದಲ್ಲಿ ಜಿಎಸ್‌ಟಿ ಕಾಯ್ದೆ ಕುರಿತು ಅರಿವು ಮೂಡಿಸುವ 2 ದಿನಗಳ ರಾಷ್ಟ್ರೀಯ ಸಮ್ಮೇಳನ ಇಲ್ಲಿ ನಡೆಯುತ್ತಿದ್ದು, ಲೆಕ್ಕಪರಿಶೋಧಕರು, ವಿದ್ಯಾರ್ಥಿಗಳು, ಉದ್ಯಮಿಗಳು ಭಾಗವಹಿಸುತ್ತಿದ್ದಾರೆ ಎಂದರು. ಪ್ರಸ್ತುತ ಮಾದರಿ ಕಾಯ್ದೆಯಲ್ಲಿ ಇದ್ದ ಕೆಲವು ನ್ಯೂನತೆಗಳನ್ನು ಗುರುತಿಸಿ ಅದರಲ್ಲಿ ಪರಿಧಿವರ್ತನೆಗಳಿಗೆ ಸಲಹೆ ಮಾಡಿದ್ದೇವೆ. ಐಸಿಎಐ ಒಟ್ಟು 800 ಸಲಹೆಗಳನ್ನು ಮಾಡಿದ್ದು ಇದರಲ್ಲಿ 300 ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದವರು ವಿವರಿಸಿದರು.

ಕಾಯ್ದೆಯ ಬಗ್ಗೆ ಅಧ್ಯಯನ ನಡೆಸಿ ಶಿಫಾರಸುಗಳನ್ನು ಮಾಡಲು ಈಗಾಗಲೇ ಸುಮಾರು 18 ಅಧ್ಯಯನ ತಂಡಗಳನ್ನು ರಚಿಸಲಾಗಿದೆ. ಮಂಗಳೂರಿನಲ್ಲಿ 19 ತಂಡ ಶೀಘ್ರದಲ್ಲೇ ರಚನೆಯಾಗಲಿದೆ. ಈ ತಂಡಗಳಿಗೆ ಕಾಯ್ದೆಯಲ್ಲಿನ ಒಂದು ನಿರ್ದಿಷ್ಟ ಅಂಶಗಳನ್ನು ಅಧ್ಯಯನಕ್ಕೆ ನೀಡಲಾಗುತ್ತಿದೆ. ತಂಡಗಳು ಪರಿಶೀಲನೆ ನಡೆಸಿ ಬೆಂಗಳೂರಿನಲ್ಲಿರುವ ಕೇಂದ್ರ ತಂಡಕ್ಕೆ ಶಿಫಾರಸುಗಳನ್ನು ನೀಡುತ್ತದೆ ಎಂದವರು ವಿವರಿಸಿದರು.

ಜನವರಿ ತಿಂಗಳನ್ನು ಜಿಎಸ್‌ಟಿ ಮಾಸ ಎಂದು ಆಚರಿಸಲಾಗುತ್ತಿದ್ದು ಜಿಎಸ್‌ಟಿ ಬಗ್ಗೆ ಅರಿವು, ಮಾಹಿತಿ ನೀಡುವ ವೆಬ್‌ ತರಗತಿಗಳನ್ನು ನಡೆಸಲಾಗುವುದು ಎಂದವರು ತಿಳಿಸಿದರು. ಐಸಿಎಐಯ ದ.ಭಾರತ ವಲಯ ಮಂಗಳೂರು ಶಾಖೆಯ ಅಧ್ಯಕ್ಷ ಕೇಶವ ಎನ್‌. ಬಳ್ಳಕ್ಕುರಾಯ, ಕಾರ್ಯದರ್ಶಿ ಶಿವಾನಂದ ಪೈ ಬಿ., ಉಪಾಧ್ಯಕ್ಷ ಭಾರ್ಗವ ತಂತ್ರಿ ಪಿ., ಬಾಬು ತೇವರ್‌ ಹಾಜರಿದ್ದರು.

ಜಿಎಸ್‌ಟಿ ಕುರಿತು ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಎಂಆರ್‌ಪಿಎಲ್‌ ಹಣಕಾಸು ನಿರ್ದೇಶಕ ಅಕ್ಷಯ ಕುಮಾರ್‌ ಸಾಹು ಉದ್ಘಾಟಿಸಿದರು. ಕೇಂದ್ರ ಅಬಧಿಕಾರಿ ಹಾಗೂ ಸೇವಾ ತೆರಿಗೆಯ ಮಂಗಳೂರು ಆಯಕ್ತ ಡಾ| ಎಂ. ಸುಬ್ರಹ್ಮಣ್ಯಂ, ಪರೋಕ್ಷ ತೆರಿಗೆಗಳ ಸಮಿತಿಯ ಅಧ್ಯಕ್ಷ ಮಧುಕರ್‌ ಹಿರೇಗಂಗೆ, ಮಂಗಳೂರು ಶಾಖೆಯ ಅಧ್ಯಕ್ಷ ಕೇಶವ ಎನ್‌. ಬಳ್ಳಕ್ಕುರಾಯ, ಕಾರ್ಯದರ್ಶಿ ಶಿವಾನಂದ ಪೈ ಬಿ., ಉಪಾಧ್ಯಕ್ಷ ಭಾರ್ಗವ ತಂತ್ರಿ ಪಿ., ಬಾಬು ತೇವರ್‌ ಮೊದಲಾದವರು ಉಪಸ್ಥಿತರಿದ್ದರು.

ಏಕ ರಾಷ್ಟ್ರ ಏಕ ತೆರಿಗೆ ಜಿಎಸ್‌ಟಿ ಪದ್ಧತಿಯ ಮೂಲ ಪರಿಕಲ್ಪನೆಯಾಗಿದೆ. ಇದರಿಂದಾಗಿ ಸಾಮಗ್ರಿಧಿಗಳ ಮೇಲೆ ಬಹುರೂಪಿ ತೆರಿಗೆಯ ಬದಲು ಏಕರೂಪದ ತೆರಿಗೆ ಜಾರಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ವಾಹನಗಳು, ಟಿವಿ, ಸಿಮೆಂಟ್‌ ಸೇರಿದಂತೆ ಹಲವು ವಸ್ತುಗಳ ಮೇಲೆ ಪ್ರಸ್ತುತ ಇರುವ ತೆರಿಗೆ ಭಾರ ಇಳಿಮುಖವಾಗಲಿದ್ದು ಬೆಲೆಯಲ್ಲಿ ಇಳಿಕೆ ಸಾಧ್ಯತೆಗಳಿವೆ ಎಂದು ಮಧುಕರ್‌ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English