ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಎರಡನೇ ಪರ್ಯಾಯಕ್ಕೆ ಪೂರ್ವಭಾವಿ ಬಾಳೆ ಮುಹೂರ್ತ

2:16 PM, Monday, December 5th, 2016
Share
1 Star2 Stars3 Stars4 Stars5 Stars
(No Ratings Yet)
Loading...

Bale-muhurtaಉಡುಪಿ: ಶ್ರೀಕೃಷ್ಣ ಮಠದಲ್ಲಿ 2018 ಜ. 18ರಂದು ಪರ್ಯಾಯ ಪೂಜೆಯನ್ನು ವಹಿಸಿಕೊಳ್ಳಲಿರುವ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಎರಡನೇ ಪರ್ಯಾಯಕ್ಕೆ ಪೂರ್ವಭಾವಿ ಬಾಳೆ ಮುಹೂರ್ತ ರವಿವಾರ ಜರಗಿತು. ಪಲಿಮಾರು ಮಠದಿಂದ ದ್ವೈವಾರ್ಷಿಕ ಪರ್ಯಾಯ ಚಕ್ರ ಆರಂಭಗೊಳ್ಳಲಿದ್ದು ಮುಂದಿನ ಸರದಿ 32ನೇ ಚಕ್ರವಾಗಿದೆ. ಶ್ರೀ ಅನಂತೇಶ್ವರ, ಶ್ರೀ ಚಂದ್ರೇಶ್ವರ, ಶ್ರೀಕೃಷ್ಣ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಪಲಿಮಾರು ಮಠಕ್ಕೆ ಬಂದು ಅಲ್ಲಿಂದ ಬಾಳೆ ಗಿಡಗಳನ್ನು ಮಥುರಾ ಛತ್ರದ ಬಳಿಗೆ ಮೆರವಣಿಗೆಯಲ್ಲಿ ತಂದು ಬಾಳೆ ಮುಹೂರ್ತ, ತುಳಸಿ ಮುಹೂರ್ತ ನಡೆಸಲಾಯಿತು. ಇದರ ಜತೆ ಕಬ್ಬಿನ ಗಿಡಗಳನ್ನೂ ನೆಡಲಾಯಿತು.

ಆಶೀರ್ವಚನ ನೀಡಿದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬಾಳೆಯೊಂದಿಗೆ ತುಳಸಿ ಗಿಡಗಳನ್ನೂ ನೆಟ್ಟು ಮುಹೂರ್ತ ನಡೆಸಲಾಗಿದೆ. ಇತ್ತೀಚೆಗೆ ಅಬೋಲ ಎಂಬ ರೋಗಕ್ಕೆ ತುಳಸಿ ಉತ್ತಮ ಔಷಧ ಎಂಬುದು ತಿಳಿದುಬಂದಿದೆ. ಆರೋಗ್ಯದ ದೃಷ್ಟಿಯಲ್ಲಿ ಪ್ರತಿ ಮನೆಯ ಪರಿಸರದಲ್ಲಿ ತುಳಸಿಗಿಡ ಬೆಳೆಯಬೇಕಾಗಿದೆ. ತುಳಸಿ ಎಲೆಗಳ ಗಾಳಿ ಸೇವನೆ ಆರೋಗ್ಯಕ್ಕೆ ಪೂರಕ. ಮನುಷ್ಯ ಹೊರಸೂಸುವ ಇಂಗಾಲದ ಡೈಆಕ್ಸೈಡ್‌ ಗಿಡಮರಗಳಿಗೆ ಅಗತ್ಯ, ಗಿಡಮರಗಳು ಹೊರಸೂಸುವ ಆಮ್ಲಜನಕ ಮನುಷ್ಯರಿಗೆ ಅಗತ್ಯವೆಂಬ ಜಗತ್‌ ಸೃಷ್ಟಿಯನ್ನು ದೇವರು ಮಾಡಿ ಪರಸ್ಪರ ಅವಲಂಬಿತನಾಗಿ ಮಾಡಿದ್ದಾನೆ. ಬಾಳೆಗಿಡ ಕಲ್ಪವೃಕ್ಷದಂತೆ. ಇದರ ಎಲ್ಲ ಅಂಶಗಳೂ ಬಳಕೆಗೆ ಯೋಗ್ಯ. ಬಾಳೆದಿಂಡನ್ನೂ ಎಸೆಯುವುದಿಲ್ಲ. ಇದರ ಪದಾರ್ಥ ಕಲ್ಲನ್ನೂ ಹೊರಹಾಕುತ್ತದೆ ಎಂದು ಹಿರಿಯರು ಹೇಳುವುದರ ಹಿಂದಿನ ವೈಜ್ಞಾನಿಕ ಅಂಶಗಳತ್ತ ಗಮನ ಹರಿಸಬೇಕಾಗಿದೆ ಎಂದರು.

ಪ್ರಧಾನಿಯವರು ನಗದುರಹಿತ ಸೇವೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಂಚಾರದಲ್ಲಿ ಭಕ್ತರ ದೇಣಿಗೆಯನ್ನು ಸ್ವೆ„ಪ್‌ ಮೂಲಕ ಪಡೆದುಕೊಳ್ಳುವ ಸ್ವೈಪಿಂಗ್‌ ಯಂತ್ರಕ್ಕೆ ಸಚಿವ ಪ್ರಮೋದ್‌ ಮಧ್ವರಾಜ್‌ ಚಾಲನೆಯಿತ್ತು ಪ್ರಥಮ ದೇಣಿಗೆ ನೀಡಿದರು.

ಇದೇ ವೇಳೆ ಪಲಿಮಾರು ಮಠದ ವೆಬ್‌ಸೈಟ್‌ನಲ್ಲಿ ಬರುವ ಮಾಹಿತಿಗಳು ಸಿಗಲಿರುವ ಮೊಬೈಲ್‌ ಆ್ಯಪ್‌ಗೆ ಚಾಲನೆ ನೀಡಲಾಯಿತು. ಮೊಬೈಲ್‌ ಪ್ಲೇಸ್ಟೋರ್‌ನಲ್ಲಿ ipomo ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿದರೆ ಅಲ್ಲಿ ಪಲಿಮಾರು ಮಠದ ವೆಬ್‌ಸೈಟ್‌ ಲಿಂಕ್‌ನಿಂದ ಮಠದ ಮಾಹಿತಿಗಳು ಲಭ್ಯವಾಗುತ್ತವೆ ಎಂದು ತಂತ್ರಜ್ಞ ಪ್ರಹ್ಲಾದ್‌ ತಿಳಿಸಿದರು.

ಔಷಧೀಯ ಸಸ್ಯಗಳು, ಮುಹೂರ್ತಗಳ ಮಹತ್ವ ಕುರಿತು ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯರು ಬರೆದ ‘ಮುಹೂರ್ತೋದಯ’ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಶಾಸಕ ವಿನಯಕುಮಾರ್‌ ಸೊರಕೆ, ಮಾಜಿ ಶಾಸಕರಾದ ಕೆ. ರಘುಪತಿ ಭಟ್‌, ಯು.ಆರ್‌. ಸಭಾಪತಿ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ನಿ.ಬೀ. ವಿಜಯ ಬಲ್ಲಾಳ್‌, ಕಟೀಲಿನ ಹರಿನಾರಾಯಣದಾಸ ಆಸ್ರಣ್ಣ, ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ, ಗಣ್ಯರಾದ ಮಟ್ಟಾರು ರತ್ನಾಕರ ಹೆಗ್ಡೆ, ಬಿ.ಎಂ. ಸುಕುಮಾರ್‌ ಶೆಟ್ಟಿ, ಗುರ್ಮೆ ಸುರೇಶ ಶೆಟ್ಟಿ, ಪ್ರೊ| ಎಂ.ಬಿ.ಪುರಾಣಿಕ್‌, ರತ್ನಕುಮಾರ್‌, ಪ್ರದೀಪ್‌ ಕುಮಾರ್‌ ಕಲ್ಕೂರ ಮೊದಲಾದವರು ಪಾಲ್ಗೊಂಡಿದ್ದರು. ದಿವಾನ್‌ ವೇದವ್ಯಾಸ ತಂತ್ರಿ ಸ್ವಾಗತಿಸಿ ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಕಳೆದ ಪರ್ಯಾಯ ಸಂದರ್ಭ ಪ್ರತಿ ರವಿವಾರ ಲಕ್ಷಾರ್ಚನೆ ನಡೆಸಲಾಗಿತ್ತು. ಮುಂದಿನ ಪರ್ಯಾಯದ ಅವಧಿ ಪ್ರತಿದಿನ ಲಕ್ಷಾರ್ಚನೆ ಮಾಡುವ ಇರಾದೆ ಇದೆ ಎಂದು ಭಾವೀ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಿಳಿಸಿದರು. ಬಾಳೆ ಮುಹೂರ್ತ ನಡೆದ ಸಂದರ್ಭ ಸುದ್ದಿಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪಡುಬಿದ್ರಿ ಸಮೀಪದ ಪಲಿಮಾರು ಮೂಲ ಮಠದ ಜಾಗದಲ್ಲಿ ತುಳಸಿ ಗಿಡಗಳನ್ನು ನೆಡಲು ಸಿದ್ಧತೆ ನಡೆಸಲಾಗಿದೆ. ಅಲ್ಲಿ ಬಾಳೆ ಗಿಡಗಳನ್ನೂ ನೆಡಲಾಗುವುದು. ಶ್ರೀಕೃಷ್ಣ ಮಠದ ಪರಿಸರದಲ್ಲಿ ಶ್ರೀಕೃಷ್ಣ ಮಠಕ್ಕಾಗಿಯೇ ತುಳಸಿ ಉದ್ಯಾನ ನಿರ್ಮಿಸಲು ಜಾಗಕ್ಕಾಗಿ ಪ್ರಯತ್ನ ನಡೆಸುತ್ತಿದ್ದೇವೆ ಎಂದರು. ಚಿಣ್ಣರ ಸಂತರ್ಪಣೆ ಯೋಜನೆಯನ್ನು ಮುಂದೆ ವಿಸ್ತರಿಸುವ ಇರಾದೆ ಇದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English