ಚೆನ್ನೈ : ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗಲೇ ಜೆ ಜಯಲಲಿತಾ ಅವರು ಮೃತಪಟ್ಟಿದ್ದಾರೆ. ಡಿಸೆಂಬರ್ 05, 2016ರ ರಾತ್ರಿ 11.30 ರ ಸುಮಾರಿಗೆ ಹೃದಯಾಘಾತಕ್ಕೊಳಗಾಗಿ ಇಹಲೋಕ ವ್ಯಾಪಾರ ಮುಗಿಸಿದ್ದಾರೆ. 68 ವರ್ಷ ವಯಸ್ಸಿನ ಜಯಲಲಿತಾ ಅವರು ಸಾವಿನಲ್ಲೂ ತನ್ನ ಗುರುವಿನ ಹಾದಿಯನ್ನು ತುಳಿದಿದ್ದಾರೆ.
ಅಧಿಕಾರದಲ್ಲಿದ್ದಾಗಲೇ ಜನಪ್ರಿಯ ಮುಖ್ಯಮಂತ್ರಿಯೊಬ್ಬರನ್ನು ಕಳೆದುಕೊಳ್ಳುವುದು ತಮಿಳುನಾಡಿನ ಜನತೆ ಪಾಲಿಗೆ ದುರಂತ ಸಂಗತಿಯಾಗಿ ಪರಿಣಮಿಸಿದೆ. ಮೊದಲಿಗೆ ಸಿ.ಎನ್ ಅಣ್ಣಾದೊರೈ ಅವರು ಕ್ಯಾನ್ಸರಿಗೆ ಬಲಿಯಾದರೆ, ನಂತರ ಎಐಎಡಿಎಂಕೆಯ ನಾಯಕ, ನಟ ಎಂಜಿ ರಾಮಚಂದ್ರನ್ ಅವರು ಹಾಗೂ ಈಗ ಪುರಚ್ಚಿ ತಲೈವಿ ಜಯಲಲಿತಾ ಅವರು ಈ ಹಾದಿ ಹಿಡಿದಿದ್ದಾರೆ.
ಅಣ್ಣಾ ಎಂದು ಕರೆಸಿಕೊಳ್ಳುತ್ತಿದ್ದ ದ್ರಾವಿಡ ಪಕ್ಷದ ನಾಯಕ ಸಿ.ಎನ್ ಅಣ್ಣಾದೊರೈ ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ಕಚೇರಿಗೆ ಹೋಗಬೇಡಿ ಎಂದು ವೈದ್ಯರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಕಚೇರಿಗೆ ಹಾಜರಾಗುತ್ತಿದ್ದರು. ಫೆಬ್ರವರಿ 3, 1969ರಂದು ಮೃತಪಟ್ಟರು.
ಅಣ್ಣಾ ಡಿಎಂಕೆ ಪಕ್ಷವನ್ನು ಉತ್ತುಂಗ ಮಟ್ಟಕ್ಕೇರಿಸಿದ ಜನಪ್ರಿಯ ನಾಯಕ ಎಂಜಿ ರಾಮಚಂದ್ರನ್ ಅವರು ನಟನಾಗಿ, ಮುಖ್ಯಮಂತ್ರಿಯಾಗಿ ತಮಿಳರಿಗೆ ಆಪ್ತರಾದವರು. ರಾಜಕೀಯವಾಗಿ ಕೂಡಾ ಜಯಲಲಿತಾ ಅವರನ್ನು ಬೆಳೆಸಿದವರು. ಮಧುಮೇಹದಿಂದ ಬಳಲುತ್ತಿದ್ದ ರಾಮಚಂದ್ರನ್ ಅವರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದರು. ಕೊನೆಗಳಿಗೆಯಲ್ಲಿ ಅಮೆರಿಕಕ್ಕೆ ಹಾರಿ ಚಿಕಿತ್ಸೆ ಪಡೆಯುವ ಯತ್ನ ಕೂಡಾ ಫಲಕಾರಿಯಾಗಲಿಲ್ಲ. ಡಿಸೆಂಬರ್ 24, 1987ರಂದು ಮೃತಪಟ್ಟರು. ಎಂಜಿಆರ್ ನಿಧನದ ಸುದ್ದಿ ಆಘಾತಕಾರಿಯಾಗಿ ಪರಿಣಮಿಸಿ ಅನೇಕ ಅಭಿಮಾನಿಗಳು ತಮ್ಮ ಸ್ಟಾರ್ ಸಿಎಂಗಾಗಿ ಪ್ರಾಣ ತೆತ್ತರು.
ನಂತರ ಅಧಿಕಾರಕ್ಕೆ ಬಂದ ಜಯಲಲಿತಾ ಅವರು ಜನಪ್ರಿಯ ಯೋಜನೆಗಳ ಮೂಲಕ ಜನಮನ್ನಣೆ ಗಳಿಸಿದರು. ಡಿಸೆಂಬರ್ 05, 2016ರಂದು ಕಿಡ್ನಿ ವೈಫಲ್ಯ, ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜಯಲಲಿತಾ ಅವರ ಪಾರ್ಥೀವ ಶರೀರವನ್ನು ರಾಜಾಜಿ ಹಾಲ್ ನಲ್ಲಿ ಇರಿಸಲಾಗುತ್ತಿದ್ದು, ಸಾರ್ವಜನಿಕರು ಅಂತಿಮ ದರ್ಶನ ಪಡೆದುಕೊಳ್ಳಬಹುದಾಗಿದೆ. ಅಂತ್ಯಕ್ರಿಯೆಯನ್ನು ಮಂಗಳವಾರ ಸಂಜೆ ವೇಳೆಗೆ ಮರೀನಾ ಬೀಚ್ ನಲ್ಲಿ ನೆರವೇರಿಸಲಾಗುವುದು, ಎಂಜಿಆರ್ ಅವರ ಸಮಾಧಿ ಪಕ್ಕದಲ್ಲೇ ಜಯಲಲಿತಾ ಅವರ ಸಮಾಧಿ ಸ್ಥಾಪಿಸಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ.
Click this button or press Ctrl+G to toggle between Kannada and English