ಉಡುಪಿ: ಮಡೆಸ್ನಾನ ಮತ್ತು ಎಡೆಸ್ನಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಉಡುಪಿಯಲ್ಲಿ ಮಡೆಸ್ನಾನದ ಬದಲು ಎಡೆಸ್ನಾನ ಸಂಪ್ರದಾಯ ಆರಂಭವಾಗಿದೆ. ಇಲ್ಲಿನ ಶ್ರೀ ಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿಯ ಮುಂದೆ ಏಳು ಮಂದಿ ಭಕ್ತರು ಎಡೆಸ್ನಾನ ಮಾಡಿ ಹರಕೆ ತೀರಿಸಿದರು.
500 ವರ್ಷಗಳ ಹಿಂದಿನ ಸಂಪ್ರದಾಯವನ್ನು ಮುರಿದ ಪೇಜಾವರ ಶ್ರೀಗಳು ತಮ್ಮ ಪರ್ಯಾಯದಲ್ಲಿ ಮೊದಲ ಬಾರಿಗೆ ಐತಿಹಾಸಿಕ ನಿರ್ಧಾರ ಕೈಗೊಂಡು ಮಡೆಸ್ನಾನಕ್ಕೆ ತಿಲಾಂಜಲಿ ಇಟ್ಟರು.
ಮಡೆಸ್ನಾನ ಮತ್ತು ಎಡೆಸ್ನಾನದ ಬಗ್ಗೆ ಅವಿಭಜಿತ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆ, ಪ್ರತಿಭಟನೆಗಳು ನಡೆದಿವೆ. ಪೇಜಾವರ ಶ್ರೀಗಳು ಮಡೆಸ್ನಾನದ ಬದಲು ಎಡೆಸ್ನಾನದ ಕಲ್ಪನೆಯನ್ನು ಮುಂದಿಟ್ಟಾಗ ಕೃಷ್ಣ ಮಠದಲ್ಲೂ ಕೂಡಾ ಎಡೆಸ್ನಾನ ಆರಂಭವಾಗುವ ನಿರೀಕ್ಷೆ ಇತ್ತು. ಪೇಜಾವರ ಶ್ರೀಗಳ ಐತಿಹಾಸಿಕ ಪರ್ಯಾಯಯದ ಆರಂಭದಲ್ಲಿ ಎಡೆಸ್ನಾನ ಪರಿಕಲ್ಪನೆ ಆರಂಭವಾಗಿದೆ. ಪೇಜಾವರ ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿಯ ಮುಂಭಾಗದಲ್ಲಿ ದೇವರಿಗೆ ಪ್ರಸಾದ ಬಡಿಸಿದ ನಂತರ ಅದೇ ಪ್ರಸಾದದ ಮೇಲೆ 7 ಭಕ್ತರು ಹೊರಳಾಡಿ ಹರಕೆ ಪೂರೈಸಿದರು.
ಮಡೆಸ್ನಾನದ ಬಗ್ಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಪೇಜಾವರ ಶ್ರೀಗಳು ತಮ್ಮದೇ ಆಡಳಿತಕ್ಕೆ ಒಳಪಟ್ಟ ಮುಚ್ಲಕೋಡು ಸುಬ್ರಮಣ್ಯ ದೇವಸ್ಥಾನದಲ್ಲಿ ಎಡೆಸ್ನಾನವನ್ನು ನಡೆಸಿ ಹೊಸ ಇತಿಹಾಸವನ್ನು ಬರೆದಿದ್ದರು.
ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯದ ಅವಧಿಯಲ್ಲಿ ಮಡೆಸ್ನಾನವನ್ನು ನಿಲ್ಲಿಸಿ ಎಡೆಸ್ನಾನವನ್ನು ಆರಂಭಿಸುವುದಾಗಿ ಶ್ರೀಗಳು ಹೇಳಿದ್ದರು. ಅಂತೆಯೇ ಶ್ರೀಗಳು ಹೇಳಿದಂತೆ ನಡೆದುಕೊಂಡು ಎಡೆಸ್ನಾನವನ್ನು ಆರಂಭಿಸಿದ್ದಾರೆ. ಬಹಳಷ್ಟು ವರ್ಷಗಳಿಂದ ತೀವ್ರ ವಿವಾದ ಸೃಷ್ಟಿಸಿದ್ದ ಮಡೆಸ್ನಾನ ಪರಿಕಲ್ಪನೆಗೆ ಪೇಜಾವರ ಶ್ರೀಗಳು ಇತಿಶ್ರೀ ಹಾಡಿದ್ದಾರೆ.
ಕೃಷ್ಣ ಮಠದಲ್ಲಿ ಎಡೆಸ್ನಾನ ಆರಂಭವಾದ ಕಾರಣ ಹರಕೆ ತೀರಿಸುವವವರ ಸಂಖ್ಯೆಯೂ ಕಡಿಮೆಯಾಗಿದೆ. ಬೆರಳೆಣಿಕೆಯಷ್ಟು ಮಂದಿ ದೇವರ ಪ್ರಸಾದದ ಮೇಲೆ ಹೊರಳಾಡಿ ಹರಕೆ ತೀರಿಸಿದರು. ಏನೇ ಇರಲಿ ಹಲವಾರು ವರ್ಷಗಳಿಂದ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಮಡೆಸ್ನಾನ ಪರಿಕಲ್ಪನೆಗೆ ಫುಲ್ ಸ್ಟಾಪ್ ಬಿದ್ದಿದೆ.
Click this button or press Ctrl+G to toggle between Kannada and English