ಪುತ್ತೂರು: ಹಲವು ದಿನಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಿಂಡಿ ಅಣೆಕಟ್ಟನ್ನು ಸ್ವಯಂ ಸ್ಫೂರ್ತಿಯಿಂದ ದುರಸ್ತಿ ಮಾಡಿ ನೀರು ಸಂಗ್ರಹಕ್ಕೆ ಯುವಕರ ಪಡೆ ಅವಕಾಶ ಮಾಡಿ ಆದರ್ಶ ಮೆರೆದಿರುವ ವಿಶಿಷ್ಠ ಕಾರ್ಯ ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆಯಿತು.
ಉಪ್ಪಿನಂಗಡಿ ಗ್ರಾಮದ ಅರ್ತಿಲನಾಲಯದ ಗುಂಡಿ ಎಂಬಲ್ಲಿನ ಕಿಂಡಿ ಅಣೆಕಟ್ಟು ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. ಕಿಂಡಿ ಅಣೆಕಟ್ಟಿನ ಹಲಗೆಯೂ ಕಣ್ಮರೆಯಾಗಿತ್ತು. ಬಳಕೆಯಾಗದೇ ಉಳಿದಿದ್ದ ಕಿಂಡಿ ಅಣೆಕಟ್ಟಿಗೆ ಅಡಕೆ ಮರದ ಪಟ್ಟಿಯನ್ನು ಅಳವಡಿಸಿ, ಸಿಮೆಂಟ್ ಗೋಣಿಚೀಲಗಳಲ್ಲಿ ಮರಳು ತುಂಬಿಸಿ ಅಣೆಕಟ್ಟಿನ ಕಿಂಡಿಯನ್ನು ಯುವಕರ ತಂಡ ಬಂದ್ ಮಾಡಿ ನೀರಿಂಗಿಸುವ ಪಣ ತೊಟ್ಟಿತ್ತು.
ಈ ಕೆಲಸದಲ್ಲಿ ಉಪ್ಪಿನಂಗಡಿ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು ಹಾಗೂ ಸುನಿಲ್ ಕುಮಾರ್ ದಡ್ಡು, ಪಂಚಾಯತ್ ಸಿಬ್ಬಂದಿ ಮಹಾಲಿಂಗರವರುಗಳು ನೇತೃತ್ವವನ್ನು ವಹಿಸಿದ್ದರೆ, ಉಪ್ಪಿನಂಗಡಿ ಕಟ್ಟಡ ಕಾರ್ಮಿಕ ಸಂಘದ ಸದಸ್ಯರುಗಳು, ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರುಗಳು ಈ ಶ್ರಮದಾನದಲ್ಲಿ ಕೈ ಜೋಡಿಸಿ ಸಾತ್ವಿಕ ಕಾರ್ಯ ಮಾಡಿದ್ದಾರೆ.
Click this button or press Ctrl+G to toggle between Kannada and English