ಮಂಗಳೂರು: ಪುತ್ತೂರು ನಗರದ ಹೊರವಲಯದ ದರ್ಬೆ ಬೈಪಾಸ್ ರಸ್ತೆ ಸಮೀಪವಿರುವ ಖಾಸಗಿ ಈಜುಕೊಳವೊಂದರಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಇದು ಈ ಈಜುಕೊಳದಲ್ಲಿ ಒಂದು ವರ್ಷದ ಅವಧಿಯಲ್ಲಿ ನಡೆದ ಎರಡನೇ ದುರಂತವಾಗಿದೆ.
ಪುತ್ತೂರು ತಾಲೂಕಿನ ತೊಟ್ಲ ನಿವಾಸಿ, ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ರೈ (19) ಎಂಬಾತ ಮೃತ ಯುವಕ.
ಕ್ರಿಕೆಟ್ ಆಟಗಾರನಾಗಿದ್ದ ಕಾರ್ತಿಕ್ ರೈ ಮಂಗಳೂರು ವಿವಿ ತಂಡ ಸದಸ್ಯನಾಗಿದ್ದ. ಎಂಪಿಎಲ್ ಪಂದ್ಯಾಟ ಆಡಲು ಅಭ್ಯಾಸ ನಡೆಸುತ್ತಿದ್ದ ಕಾರ್ತಿಕ್ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ತನ್ನ ಸ್ನೇಹಿತರ ಜೊತೆ ರಜೆಯ ಸಂದರ್ಭದಲ್ಲಿ ಉಳಿದುಕೊಂಡಿದ್ದ. ತಾಲೂಕು ಕ್ರೀಡಾಂಗಣದಲ್ಲಿ ನಡೆದಿದ್ದ ಸ್ವಿಝ್ಲರ್ ಮೋರ್ನಿಂಗ್ ಪಂದ್ಯಾಟದಲ್ಲಿ ಆಟವಾಡಿ ಬಳಿಕ ಫಿಲೋಮಿನಾ ಕಾಲೇಜಿನಲ್ಲಿ ಎಂದಿನಂತೆ ಕ್ರಿಕೆಟ್ ತರಬೇತಿಯಲ್ಲಿ ತೊಡಗಿದ್ದ.
ಬಳಿಕ ಕಾರ್ತಿಕ್ ತನ್ನ ಸಹಪಾಠಿಗಳಾದ ಭುವನೇಂದ್ರ ಹಾಗೂ ಸಾಗರ್ ಎಂಬುವರ ಜೊತೆ ದರ್ಬೆ ಬೈಪಾಸ್ ರಸ್ತೆಯ ಸಮೀಪವಿರುವ ಎ.ಎಸ್.ಆರ್. ಈಜುಕೊಳಕ್ಕೆ ಈಜಲು ಹೋಗಿದ್ದ. ಈ ವೇಳೆ ಹೃದಯಾಘಾತಕ್ಕೊಳಗಾಗಿ ಈಜುಕೊಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈಜುಕೊಳಕ್ಕೆ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ.
ಈ ಈಜುಕೊಳದಲ್ಲಿ ನಡೆದ ಎರಡನೇ ಸಾವಿನ ದುರಂತ ಇದಾಗಿದೆ. ಕಳೆದ ಎಪ್ರಿಲ್‌ನಲ್ಲಿ ಪುತ್ತೂರು ತಾಲೂಕು ಚಾರ್ವಕದ ಯುವಕನೊಬ್ಬ ಇದೇ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದ.
Click this button or press Ctrl+G to toggle between Kannada and English