ಮಂಗಳೂರು: ಬ್ಯಾಂಕ್ ಖಾತೆಯಲ್ಲಿ ಲೋಪವಿದೆ ಎಂದು ನಂಬಿಸಿ ಅಪರಿಚಿತ ವ್ಯಕ್ತಿಯೋರ್ವ ಡೆಬಿಟ್ ಕಾರ್ಡ್ ಪಾಸ್‌ವರ್ಡ್ ನಂಬರ್ ಪಡೆದು ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 24,899ರೂ. ಹಣವನ್ನ ಡ್ರಾ ಮಾಡಿಕೊಂಡು ವಂಚಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಘಟನೆಯ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ. ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಅಲೆಂಜೆ ಭಾರತಿ ನಿಲಯದ ನಿವಾಸಿ ಬಾಲಕೃಷ್ಣ ಗೌಡ ಅವರ ಪತ್ನಿ ಮೋಹಿನಿ ಅವರೇ ವಂಚನೆಗೊಳಗಾದವರು.
ಪುತ್ತೂರಿನ ನೆಹರೂ ನಗರದಲ್ಲಿರುವ ಕೆನರಾ ಬ್ಯಾಂಕಿನಲ್ಲಿ ತಮ್ಮ ಖಾತೆಯಿದ್ದು, ಮಂಗಳವಾರ ತಮಗೆ ದೂರವಾಣಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬರು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಲೋಪವಿದೆ. ದಾಖಲೆ ಪತ್ರಗಳು ಸರಿಯಾಗಿಲ್ಲ ಎಂದು ನಂಬಿಸಿ ಅದನ್ನು ಸರಿಪಡಿಸಲು ಡೆಬಿಟ್ ಕಾರ್ಡ್ ಪಾಸ್‌ವರ್ಡ್ ನೀಡುವಂತೆ ತಿಳಿಸಿದ್ದರು.
ಅದರಂತೆ ತಾವು ಅವರಿಗೆ ಡೆಬಿಟ್ ಕಾರ್ಡ್ ಪಾಸ್‌ವರ್ಡ್ ನೀಡಿದ್ದು, ಅದನ್ನು ಬಳಸಿಕೊಂಡು ತನ್ನ ಬ್ಯಾಂಕ್ ಖಾತೆಯಲ್ಲಿದ್ದ 24,899 ರೂ.ಅನ್ನು ಡ್ರಾ ಮಾಡಿಕೊಂಡು ವಂಚಿಸಲಾಗಿದೆ ಎಂದು ಮೋಹಿನಿ ಅವರು ಪುತ್ತೂರು ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂದೆಡೆಯಲ್ಲಿ ರಿಸರ್ವ್ ಬ್ಯಾಂಕ್ ಮತ್ತು ಪೊಲೀರು ಸರ್ಕಾರದ ಸಹಭಾಗಿತ್ವದಲ್ಲಿ ಹಣಕಾಸು ವಂಚನೆಯ ಕುರಿತು ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆಸುತ್ತಿದ್ದರೂ ಇನ್ನೊಂದೆಡೆಯಲ್ಲಿ ಇಂತಹ ವಂಚನೆ ಪ್ರಕರಣಗಳು ನಡೆಯುತ್ತಲೇ ಸಾಗಿದೆ.
ಬ್ಯಾಂಕ್ ಖಾತೆ ನಂಬರ್, ಎಟಿಎಂ ಪಾಸ್‌ವರ್ಡ್ ಪಡೆದುಕೊಂಡು ವಂಚಿಸುವ, ಇಂಟರ್‌ನೆಟ್ ಜಾಲದ ಮೂಲಕ ವಂಚಿಸುವ ಜಾಲಗಳು ತುಂಬಿಕೊಂಡಿದ್ದರೂ, ವಂಚನೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಜನತೆ ಇನ್ನೂ ಜಾಗೃತರಾಗಿಲ್ಲ. ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಇನ್ನಷ್ಟು ಹೆಚ್ಚಾಗುತ್ತಿವೆ.
Click this button or press Ctrl+G to toggle between Kannada and English