ಮಂಗಳೂರು: 2008, ನವೆಂಬರ್ 25 ರಂದು ಮುಂಬೈನ ಹೊಟೇಲ್ ತಾಜ್‌ನಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಅಮಾಯಕರ ಬಲಿ ಮಾಸಲಾರದ ನೋವಾಗಿದ್ದು, ಮುಂಬೈ ದಾಳಿ ಹುತಾತ್ಮರ ಗೌರವಾರ್ಥ ಹಾಗೂ ವಿಶ್ವಶಾಂತಿಗಾಗಿ ವಿಂಗ್ ಕಮಾಂಡರ್ ಪರಮವೀರ್ ಸಿಂಗ್ ನೇತೃತ್ವದಲ್ಲಿ ಸಾಹಸಿಗಳು ಅರಬ್ಬೀ ಸಮುದ್ರದಲ್ಲಿ ಈಜಿ `ಶತಮಾನದ ಈಜು’ ಗಿನ್ನೀಸ್ ದಾಖಲೆ ಮಾಡಿದ್ದಾರೆ.
ನವೆಂಬರ್ 26ರಂದು ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಹೊರಟಿದ್ದ ರಿಲೇ ಈಜುಗಾರರ ತಂಡ ಗೋವಾ ಮೂಲಕ ಮಂಗಳೂರು ತಲುಪುವ ಮೂಲಕ 1,031 ಕಿ.ಮೀ. (567 ನಾಟಿಕಲ್ಸ್) ಕ್ರಮಿಸಿದೆ. ಈ ಹಿಂದಿನ ಎರಡು ವಿಶ್ವದಾಖಲೆಗಳನ್ನು ಸೀ ಹ್ಯಾಕ್ ಯಾತ್ರೆ ಮುರಿದಿದೆ. ಅಮೆರಿಕದ ನೈಟ್ ಟ್ರೈನ್ಸ್ 505 ಕಿಲೋ ಮೀಟರ್ ದೂರವನ್ನು ಆರು ಮಂದಿ ಸಾಹಸಿಗರು ಈಜಿದ್ದು ಈವರೆಗಿನ ದಾಖಲೆಯಾಗಿತ್ತು. ಇನ್ನು 2009ರಲ್ಲಿ 200 ಈಜುಗಾರರು 748.75 ಕಿಲೋ ಮೀಟರ್ ಈಜಿದ್ದು, ಎರಡನೇ ದಾಖಲೆಯಾಗಿತ್ತು. ಆದರೆ, ಈ ಎಲ್ಲಾ ದಾಖಲೆಗಳನ್ನು ಮುರಿದು ಕಮಾಂಡರ್ ಪರಮವೀರ್ ಸಿಂಗ್ ನೇತೃತ್ವದ ತಂಡ ಈ ಸಾಹಸ ಮೆರೆದಿದೆ.
ಇದು ವಿಶ್ವಶಾಂತಿಗಾಗಿ ಮಾಡಿದ ಸಾಧನೆ ಎಂಬ ಹೆಮ್ಮೆಯ ಜೊತೆಗೆ ಜಾಗೃತಿಯೂ ಅಡಗಿದೆ ಎನ್ನುತ್ತಾರೆ ಪರಮವೀರ್. ಹಿಂಸೆಯಿಂದ ಅಮಾಯಕರು ನಷ್ಟ ಅನುಭವಿಸುತ್ತಾರೆ. ಇದು ಮತ್ತೆ ಮರುಕಳಿಸದಿರಲಿ ಎಂಬ ಕಾರಣದಿಂದಲೇ ಈ ಸಾಹಸಕ್ಕೆ ಕೈಹಾಕಲಾಯಿತು ಎಂದಿದ್ದಾರೆ.
ಈ ಕಾರ್ಯಕ್ರಮವನ್ನು ಐಡಿಬಿಐ ಬ್ಯಾಂಕ್ ಹಾಗೂ ರೋಟರಿ ಕ್ಲಬ್ ಪ್ರಾಯೋಜಿಸಿದೆ. ಸಮುದ್ರದಲ್ಲಿ ನಿರಂತರ ಈಜುವುದೆಂದರೆ ಸುಲಭದ ಕಾರ್ಯವಲ್ಲ. ಜೆಲ್ಲಿ ಮೀನುಗಳಂತಹ ಅಪಾಯಕಾರಿ ಮತ್ಸ್ಯ ಸಂತತಿಗಳು, ಸಮುದ್ರದಾಳದಲ್ಲಿರುವ ಬಂಡೆಗಳು, ಕೆಲವೊಮ್ಮೆ ಹವಾಮಾನ ವೈಪರೀತ್ಯಕ್ಕೆ ಎದೆಯೊಡ್ಡಿ ಮುಂದೆ ಸಾಗಬೇಕು.
ಪೂರ್ವದ ಸಮುದ್ರಗಳಿಗಿಂತ ಅರಬ್ಬೀ ಸಮುದ್ರದಲ್ಲಿ ಈಜುವುದೇ ಕಡಿಮೆ ಸವಾಲು. ಅದರಲ್ಲೂ ಮಂಗಳೂರು ಸಮುದ್ರದ ದೇಶದಲ್ಲೇ ಅಪರೂಪ ಮತ್ತು ಅತ್ಯಂತ ಸ್ವಚ್ಛ ಸಮುದ್ರ. ಆದರೆ ಇದಕ್ಕೆ ಇನ್ನೂ ಪ್ರಚಾರ ಸಿಕ್ಕಿಲ್ಲ. ಹಾಗಾಗಿ ಜನಪ್ರಿಯವಾಗಿಲ್ಲ ಎಂದರು ಪರಮವೀರ್ ಸಿಂಗ್.
Click this button or press Ctrl+G to toggle between Kannada and English