ಮಂಗಳೂರು: ಹೆಜ್ಜೇನು ದಾಳಿಯಿಂದ ವೃದ್ಧೆಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಸೋಮೇಶ್ವರ ಪಂಚಾಯತ್ ವ್ಯಾಪ್ತಿಯ ಪಿಲಾರು ಲಕ್ಷ್ಮೀಗುಡ್ಡೆ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.
ಉಳಾಯಿಬೆಟ್ಟು ನಿವಾಸಿ ಕಮಲಾ (65) ಮೃತ ವೃದ್ಧೆ. ಅವರ ರಕ್ಷಣೆಗೆ ಬಂದ ಅಳಿಯ ಶ್ರೀಧರ್ (49), ಮಗಳು ಲೀಲಾವತಿ (45) ಮತ್ತು ಅಳಿಯನ ತಾಯಿ ಜಾನಕಿ (70) ಎಂಬುವರು ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಕ್ಷ್ಮೀಗುಡ್ಡೆಯಲ್ಲಿರುವ ಅಳಿಯ ಶ್ರೀಧರ್ ಮನೆಗೆ ಕಮಲಾ ಎರಡು ದಿನಗಳ ಹಿಂದೆ ಬಂದಿದ್ದರು. ನಿನ್ನೆ ಮಧ್ಯಾಹ್ನ ಮನೆ ಸಮೀಪದ ಕಾಡಿಗೆ ಕಟ್ಟಿಗೆಗೆಂದು ಶ್ರೀಧರ್ ಅವರ ತಾಯಿ ಜಾನಕಿ ಹೊರಟಾಗ ಕಮಲಾ ಅವರ ಜತೆಗೆ ತೆರಳಿದ್ದರು.
ಈ ವೇಳೆ ಕಟ್ಟಿಗೆಗಾಗಿ ಹುಡುಕಾಡುತ್ತಿದ್ದಂತೆ ಹೆಜ್ಜೇನಿನ ಹಿಂಡು ಕಮಲಾ ಅವರ ಮೇಲೆ ದಾಳಿ ನಡೆಸಿತ್ತು. ಆಗ ಕಮಲಾ ಅವರ ಬೊಬ್ಬೆ ಕೇಳಿ ಸ್ವಲ್ಪ ದೂರದಲ್ಲಿದ್ದ ಜಾನಕಿ ಓಡಿ ಬಂದು ರಕ್ಷಿಸಲು ಮುಂದಾಗಿದ್ದರು. ಆದರೆ ಅವರ ಮೇಲು ಹೆಜ್ಜೇನು ದಾಳಿ ನಡೆಸಿವೆ. ಇಬ್ಬರ ಕೂಗು ಕೇಳಿ ಶ್ರೀಧರ್ ಮತ್ತು ಲೀಲಾವತಿ ದಂಪತಿ ಸ್ಥಳಕ್ಕೆ ಬಂದಾಗ ಅವರ ಮೇಲೂ ಹೆಜ್ಜೇನು ದಾಳಿ ನಡೆಸಿವೆ.
ಅಲ್ಲಿಂದ ಶ್ರೀಧರ್ ಅವರು ಮೂವರನ್ನು ಹೊರತಂದು, ಗಂಭೀರ ಗಾಯಗೊಂಡಿದ್ದ ಕಮಲಾ ಅವರನ್ನು ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಶ್ರೀಧರ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರೆ, ಜಾನಕಿ ಚಿಕಿತ್ಸೆ ಪಡೆಯುತ್ತಿದ್ದು, ಲೀಲಾವತಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Click this button or press Ctrl+G to toggle between Kannada and English