ಮಂಗಳೂರು: ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ ಬಳಿಕ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಡಿಸ್ಚಾರ್ಜ್ ಮಾಡುವ ವೇಳೆ ಹಳೆಯ ನೋಟು ಸ್ವೀಕರಿಸದಿರುವ ಬಗ್ಗೆ ರಾಜ್ಯದೆಲ್ಲೆಡೆ ದೂರುಗಳು ಬಂದಿವೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಅಂಕುಶ ಹಾಕಲು ಸಜ್ಜಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ಸರ್ವಾಧಿಕಾರಿ ಧೋರಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಪಿಎಂಡಿಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಶ್ಮೆಂಟ್) ಕಾಯ್ದೆಗೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಸಮಿತಿ ಕೆಲವು ತಿದ್ದುಪಡಿಗಳ ನಂತರ 2-3 ತಿಂಗಳೊಳಗೆ ವರದಿ ನೀಡಲಿದೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮೊದಲು ಪಾವತಿ ನಂತರ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಜನರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಬರಬೇಕಾದರೆ ಜನಪ್ರತಿನಿಧಿಗಳೂ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು. ಇತ್ತೀಚೆಗೆ ತಾನೂ ಬೋರಿಂಗ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದದ್ದನ್ನು ನೆನಪಿಸಿಕೊಂಡರು.
ಸದ್ಯ ರಾಜ್ಯದ ಜನತೆಗೆ ಬೇಕಾದುದು ವೈದ್ಯಕೀಯ ಕಾಲೇಜಲ್ಲ. ಈಗಾಗಲೇ ಇಲ್ಲಿ 50 ಕಾಲೇಜುಗಳಿವೆ. ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಅವಶ್ಯಕತೆಯಿದೆ. ಅಲ್ಲಿ ಸಾಮಾನ್ಯ ಜನರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು. ವೆನ್ಲಾಕ್ ಆಸ್ಪತ್ರೆಯನ್ನು ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ಅನ್ವಯವಾಗುವಂತೆ ವರ್ಲ್ಡ್ ಹೆಲ್ತ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ಎಲ್ಲರಿಗೂ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುವುದು ಎಂದು ತಿಳಿಸಿದರು.
Click this button or press Ctrl+G to toggle between Kannada and English