ಮಂಗಳೂರು: ಕವಿ, ಸಾಹಿತಿ, ಪತ್ರಿಕಾ ಛಾಯಾಗ್ರಾಹಕ ಅಹ್ಮದ್ ಅನ್ವರ್ (55) ನಿಧನರಾದರು. ಮೂಲತಃ ಬೆಂಗರೆಯ ಪ್ರಸ್ತುತ ಮಂಗಳೂರಿನ ಬಲ್ಮಠದಲ್ಲಿ ನೆಲೆಸಿರುವ ಅಹ್ಮದ್ ಅನ್ವರ್, ಕಳೆದ ನಾಲ್ಕೈದು ವರ್ಷದಿಂದ ಅಸೌಖ್ಯದಿಂದಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕವಿ ಹೃದಯದ ಅಹ್ಮದ್ ಅನ್ವರ್ ಅವರು ಜವಳಿ ವ್ಯಾಪಾರಿಯಾಗಿ ವೃತ್ತಿ ಆರಂಭಿಸಿದ್ದರು. ಆ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಕರ್ಷಿತರಾಗಿ, ಫೋಟೋಗ್ರಾಫರಾಗಿ ಗಮನ ಸೆಳೆದಿದ್ದರು. ಕತೆ, ಕವನ, ಲೇಖನ ನಿರಂತರವಾಗಿ ಬರೆಯುತ್ತಿದ್ದರು. ಅಹ್ಮದ್ ಅನ್ವರ್ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದರು.
ಕನ್ನಡ, ಉರ್ದು, ಬ್ಯಾರಿ ಭಾಷೆಗಳಲ್ಲಿ ಹಿಡಿತ ಸಾಧಿಸಿದ್ದ ಅಹ್ಮದ್ ಅನ್ವರ್ ಭಾರತಗೀತಾ, ಗುಲ್ಮೊಹರ್, ನನ್ನ ಕನಸಿನ ಭಾರತ, ಬೇವು ಬೆಲ್ಲ ಇತ್ಯಾದಿ ಕೃತಿಗಳನ್ನು ರಚಿಸಿದ್ದರು. ಇವರಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದಿಂದ ಅತ್ತಿಮಬ್ಬೆ ಪ್ರಶಸ್ತಿ, ಸ್ನೇಹಸೇತು ಪ್ರಶಸ್ತಿ ಲಭಿಸಿದೆ.
ಮಂಗಳೂರಿನ ಸಹೃದಯಿ ಗೆಳೆಯರು ಇತ್ತೀಚೆಗಷ್ಟೆ ರಚಿಸಿದ್ದ ‘ಬಿಳಿಚುಕ್ಕೆ’ ಪ್ರಕಾಶನವು ಇವರ ಕವನ ಸಂಕಲನ ‘ಪಯನಿಗಳನ ಪದ್ಯಗಳು’ ಕೃತಿಯನ್ನು ಪ್ರಕಟಿಸಿತ್ತು. ಅದನ್ನು ಬಿಡುಗಡೆಗೊಳಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದರು. ಡಿ. 23ರಂದು ಮಂಗಳೂರಿನ ಪುರಭವನದಲ್ಲಿ ಈ ಕೃತಿ ಬಿಡುಗಡೆಗೊಳಿಸಲಿತ್ತು. ಖ್ಯಾತ ಲೇಖಕಿ ವೈದೇಹಿ ಮುನ್ನುಡಿ ಬರೆದಿದ್ದಾರೆ.
ಅನಾರೋಗ್ಯದಲ್ಲಿರುವಾಲೇ ತನ್ನ ಫೋಟೋಗಳ ಪ್ರದರ್ಶನವನ್ನು ಮಂಗಳೂರಿನಲ್ಲಿ ಏರ್ಪಡಿಸಿದ್ದರು. ಅವರ ಕವನ ಸಂಕಲನ ಬಿಡುಗಡೆ ಬಳಿಕ ತನ್ನ ಎಲ್ಲಾ ಫೋಟೋಗಳ ಪ್ರದರ್ಶನವನ್ನು ಮತ್ತೊಮ್ಮೆ ಆಯೋಜಿಸಲು ಆಶಿಸಿದ್ದರು.
Click this button or press Ctrl+G to toggle between Kannada and English