ಮಂಗಳೂರು: ಶಿವಮೊಗ್ಗದ ಸಕ್ರೆಬೈಲು ಬಳಿ ಅಪ್ರಾಪ್ತ ಬಾಲಕಿಯ ಮೇಲೆ 45 ದಿನಗಳ ಕಾಲ ನಿರಂತರ ಅತ್ಯಾಚಾರವೆಸಗಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಯಿತು.
ಈ ಹಿಂದೆಯೂ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನಿ ನಂದಿತಾ ಪೂಜಾರಿ ಮೇಲೆ ಧರ್ಮಾಂಧರು ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಹತ್ಯೆಗೈದಿದ್ದರು. ಪೊಲೀಸ್ ವರದಿಯ ಪ್ರಕಾರ ಶಿವಮೊಗ್ಗ ವಲಯದಲ್ಲಿ ಕಳೆದ ಮೂರು ವರ್ಷದಲ್ಲಿ 86 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿದೆ.
ಇದು ರಾಜ್ಯದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣ ಘಟಿಸುತ್ತಿರುವ ಜಿಲ್ಲೆಯೆಂದು ಕುಖ್ಯಾತಿ ಪಡೆದಿರುವುದು ಅತ್ಯಂತ ಕಳವಳಿಕಾರಿ ಸಂಗತಿಯಾಗಿದೆ. ಕುವೆಂಪುರಂತಹ ಕವಿಗಳನ್ನು ರಾಜ್ಯಕ್ಕೆ ನೀಡಿದ, ಮಲೆನಾಡು ಹೆಬ್ಬಾಗಿಲಾದ ಶಿವಮೊಗ್ಗ ಈಗ ಅತ್ಯಾಚಾರಿಗಳ ಬೀಡಾಗಿರುವುದು ದುರ್ದೈವ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಮಹತ್ವದ ಅಂಶವೆಂದರೆ ಶಿವಮೊಗ್ಗದ ಸಕ್ರೆಬೈಲು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಇದುವರೆಗೂ ಬಂಧಿಸಲಿಲ್ಲ. ಅಲ್ಲದೆ ಸ್ಥಳೀಯ ರಾಜಕೀಯ ಮುಖಂಡರಿಂದ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿ ಹಾಕುತ್ತಿರುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯತ್ತಿರುವುದು ಸಹ ಗಮನಕ್ಕೆ ಬಂದಿದೆ.
ಧರ್ಮಾಂಧ ಶಕ್ತಿಗಳು ಇಂತಹ ರಾಜಕೀಯ ಶಕ್ತಿಗಳ ದುರ್ಬಳಕೆಯನ್ನು ಮಾಡಿಕೊಂಡು ಅಮಾಯಕ ಯುವತಿ – ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿರುವುದು ಮತ್ತು ರಾಜಕೀಯ ಶಕ್ತಿಯ ಪ್ರಭಾವ ಬಳಸಿ, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English