ಒಂದು ತಿಂಗಳೊಳಗೆ ಜಾಗ ಗುರುತಿಸಿ, ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುವುದು: ಸಚಿವ ಆಂಜನೇಯ

11:45 AM, Saturday, December 24th, 2016
Share
1 Star2 Stars3 Stars4 Stars5 Stars
(No Ratings Yet)
Loading...

H Anjaneyaಮಡಿಕೇರಿ: ದಿಡ್ಡಳ್ಳಿಯಲ್ಲಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ 577 ಕುಟುಂಬಗಳಿಗೆ ಒಂದು ತಿಂಗಳೊಳಗೆ ಜಾಗ ಗುರುತಿಸಿ, ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಭರವಸೆ ನೀಡಿದ್ದಾರೆ.

ಇಂದು ದಿಡ್ಡಳ್ಳಿ ಹಾಡಿಗೆ ಭೇಟಿ ನೀಡಿ ಅಹವಾಲು ಆಲಿಸಿದ ಬಳಿಕ ಮಡಿಕೇರಿಯಲ್ಲಿ ಶಾಸಕರು ಮತ್ತು ಅಧಿಕಾರಿಗಳ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಗಿರಿಜನರಿಗೆ ಸದ್ಯ ಅವರಿರುವ ಸ್ಥಳದಲ್ಲೇ ಎಲ್ಲಾ ಸೌಲಭ್ಯ ಒದಗಿಸಲಾಗುವುದು. ಇದಕ್ಕಾಗಿ ಸರ್ಕಾರ ತುರ್ತಾಗಿ 1 ಕೋಟಿ ರೂ. ಅನುದಾನ ನೀಡಿದೆ ಎಂದು ತಿಳಿಸಿದ ಅವರು, ಇದೇ ಸಂದರ್ಭದಲ್ಲಿ ಆ ಚೆಕ್‌ನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಒಂದು ತಿಂಗಳ ಒಳಗೆ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಕಾಡಂಚಿನ ಭೂಮಿಯ ಸರ್ವೆ ಮಾಡಿ ಸರ್ಕಾರಿ ಭೂಮಿಯನ್ನು ಪತ್ತೆ ಮಾಡಲಿವೆ. ಇದೇ ಜಾಗದಲ್ಲಿ ಕ್ರಮೇಣ ಗಿರಿಜನದ ಬಡಾವಣೆ ನಿರ್ಮಿಸಲಾಗುವುದು ಎಂದು ಆಂಜನೇಯ ಹೇಳಿದರು.

ಈಗಾಗಲೇ ದಿಡ್ಡಳ್ಳಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಮೂಲ ನಿವಾಸಿ ಗಿರಿಜನರಿಗೆ ಹೊಸ ಬಡಾವಣೆ ನಿರ್ಮಿಸಿ ವಿದ್ಯುತ್, ರಸ್ತೆ ಸಂಪರ್ಕ, ಚರಂಡಿ, ಕುಡಿಯುವ ನೀರು, ಅಂಗನವಾಡಿ, ಶಾಲೆ ಇತರೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅವರ ಉದ್ಯೋಗಕ್ಕೂ ಅನುಕೂಲ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು.

ಸರ್ಕಾರಿ ಭೂಮಿ ದೊರೆಯದಿದ್ದಲಿ ಅರಣ್ಯ ಅಂಚಿನ ಭಾಗದಲ್ಲಿರುವ ಖಾಸಗಿಯವರ ಭೂಮಿಯನ್ನಾದರೂ ಮಾರುಕಟ್ಟೆ ದರದಲ್ಲಿ ಖರೀದಿಸಿ ಗಿರಿಜನರಿಗೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಆಂಜನೇಯ ವಿವರಿಸಿದರು.

ನಿವೇಶನ ಹಾಗೂ ವಸತಿ ರಹಿತ ಬುಡಕಟ್ಟು ಜನರಿಗೆ ನಿವೇಶನ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಕಾನೂನು, ಅರಣ್ಯ, ಕಂದಾಯ, ಸಮಾಜ ಕಲ್ಯಾಣ ಸಚಿವರು ಹಾಗೂ ಕಾರ್ಯದರ್ಶಿಗಳು, ಪ್ರಗತಿಪರ ಚಿಂತಕರು ಹಾಗೂ ಕಾನೂನು ತಜ್ಞರನ್ನೊಳಗೊಂಡ ಉನ್ನತ ಮಟ್ಟದ ಸಭೆ ಕರೆಯಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English