ಮಂಗಳೂರು: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಮೂರನೇ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಹೆಚ್ಚುವರಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಡಿ.17ರಂದು ಮೂರನೇ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪ ಪಟ್ಟಿಯನ್ನು ತನಿಖಾಧಿಕಾರಿಯಾಗಿರುವ ಎಸಿಪಿ ಉದಯ ನಾಯಕ್ ಸಲ್ಲಿಸಿದ್ದಾರೆ.
325 ಪುಟಗಳ ಈ ಆರೋಪ ಪಟ್ಟಿಯಲ್ಲಿ 130 ಸಾಕ್ಷಿಗಳನ್ನು ವಿಚಾರಿಸಿರುವ ಕುರಿತು ವಿವರಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಎಲ್ಲ ಆರೋಪಿಗಳೂ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಆರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ.
ವಿನಾಯಕ ಬಾಳಿಗಾರನ್ನು ಮಾ.21ರಂದು ಕೊಲೆ ಮಾಡಲಾಗಿತ್ತು. ಈ ಘಟನೆ ನಡೆದು ಆರೋಪಿಗಳನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ 750 ಪುಟಗಳ ಪ್ರಥಮ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಈ ಹೆಚ್ಚುವರಿ ಆರೋಪ ಪಟ್ಟಿಯಲ್ಲಿ 2013-14ರಲ್ಲಿ ಮಂಗಳೂರಿನ ವಿಠೋಬ ದೇವಸ್ಥಾನದ ಲಾಕರ್ ಒಡೆದ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸೇರಿದಂತೆ ಆತನ ಸಹಚರರು ದೇವಸ್ಥಾನದ ಅನುಮತಿ ಇಲ್ಲದೇ ಲಾಕರ್ ಒಡೆದಿದ್ದಾರೆ ಎಂಬ ಆರೋಪವಿದೆ.
ಇದೊಂದು ಕಳ್ಳತನ ಪ್ರಕರಣವೆಂದು ಪೊಲೀಸರಿಗೆ ದೂರು ನೀಡಲಾಗಿತ್ತು. ದೇವಸ್ಥಾನದ ಚಟುವಟಿಕೆಯನ್ನು ನಡೆಸಲು ಸುಧಾ ಸೇವಾ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಲು ನರೇಶ್ ಶೆಣೈ ಪ್ರೇರಣೆ ನೀಡಿದ್ದಾರೆ.
ಆರೋಪಿ ಸ್ಥಾನದಲ್ಲಿರುವ ಅವರನ್ನು ಪ್ರತಿಷ್ಠಾನದಿಂದ ಕೈಬಿಡಬೇಕು ಎಂದು ವಿನಾಯಕ ಬಾಳಿಗಾ ಅವರು ಪ್ರತಿಷ್ಠಾನ ಸಂಚಾಲಕ ಅತುಲ್ ಕುಡ್ವ ಎಂಬವರಿಗೆ ಪತ್ರ ಬರೆದಿರುವುದನ್ನು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಕೂಡ ವಿನಾಯಕ ಬಾಳಿಗ ಕೊಲೆಯ ದ್ವೇಷಕ್ಕೆ ಕಾರಣವಾಗಿದೆ ಎಂಬ ತನಿಖಾ ವರದಿಯನ್ನು ಆರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ ಎನ್ನಲಾಗಿದೆ.
ಇದಲ್ಲದೆ ಇನ್ನೂ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲು ಅವಕಾಶವಿದೆ. ವಿನಾಯಕ ಬಾಳಿಗಾ ಕೊಲೆ ಘಟನೆಗೆ ಸಂಬಂಧಿಸಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇನ್ನಷ್ಟೆ ಬರಬೇಕಿದ್ದು, ರಕ್ತದ ಮಾದರಿ ಪರೀಕ್ಷೆಗಳ ವರದಿ ತನಿಖಾಧಿಕಾರಿಗಳ ಕೈ ಸೇರಿಲ್ಲ. ಇವೆಲ್ಲವನ್ನೂ ಕ್ರೋಢೀಕರಿಸಿ ಮತ್ತೆ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸುವ ಅವಕಾಶವನ್ನು ಮುಕ್ತವಾಗಿ ಇರಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
Click this button or press Ctrl+G to toggle between Kannada and English