ಮೂಡುಬಿದಿರೆ: ಮಾನವನ ಅಪರಿಮಿತ ಸ್ವಾರ್ಥ ಹಾಗೂ ನಿರಂತರ ಪ್ರಕೃತಿಯ ಶೋಷಣೆ ನಮ್ಮೆಲ್ಲಾ ತೊಂದರೆಗಳಿಗೆ ಮೂಲ ಕಾರಣ. ಅತಿ ಸೂಕ್ಷ್ಮ ಜೀವ ವೈವಿಧ್ಯ ಪ್ರದೇಶ ಎಂದು ಗುರುತಿಸಿರುವ ಪಶ್ಚಿಮಘಟ್ಟ ಭಾರತದ ಒಟ್ಟು ಭೂ ಭಾಗದ 2.5% ರಷ್ಟಿದೆ. ಆದರೆ ಈ ಸಣ್ಣ ಭೂ ಪ್ರದೆಶವನ್ನೂ ರಕ್ಷಿಸಲು ಸಾಧ್ಯವಾಗದೇ ಇರುವುದು ನಮ್ಮ ವೈಫಲ್ಯ ಎಂದು ಐ.ಐ.ಎಸ್.ಸಿ ಬೆಂಗಳೂರು ಮುಖ್ಯಸ್ಥ ಡಾ. ಟಿ.ವಿ.ರಾಮಚಂದ್ರ ಹೇಳಿದರು.
ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಧನ ಮತ್ತು ತೇವಾಂಶ ಸಂಶೋಧನಾ ಕೇಂದ್ರ (ಎನರ್ಜಿ & ವೆಟ್‍ಲ್ಯಾಂಡ್ ರಿಸರ್ಚ ಗ್ರೂಪ್) ಪರಿಸರ ವಿಜ್ಞಾನಗಳ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ, ಆಳ್ವಾಸ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮಿಜಾರು, ಆಳ್ವಾಸ್ ಕಾಲೇಜು, ವಿದ್ಯಾಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ನಾಲ್ಕು ದಿನಗಳ ‘ಲೇಕ್ 2016’-ಅಂತಾರಾಷ್ಟ್ರೀಯ ವಿಚಾರ ಸಂಕಿರಣ- ”ಪಶ್ಚಿಮ ಘಟ್ಟದ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ”ಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಪಶ್ಚಿಮಘಟ್ಟ ಉಳಿವಿಗೆ ಯುವಜನತೆ ಕೈ ಜೋಡಿಸಬೇಕಾಗಿದೆ. ಯುವಜನತೆಯು ಶುದ್ಧ ನೀರು, ಗಾಳಿ, ಪರಿಸರಕ್ಕಾಗಿ ಹೋರಾಡಬೇಕಾಗಿದೆ . ಭೂಮಿತಾಯಿಗೆ ಹಸಿರು ಸೀರೆ ಉಡಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಭೈರಪ್ಪ, ಇಂತಹ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿವೆ ಎಂದರು. ಶಿರಸಿ ಸೋಂದೆ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಪರಿಸರ ವಿರೋಧಿ ಚಟುವಟಿಕೆಯನ್ನು ಸರ್ಕಾರ ಸ್ವಾಗತಿಸುವುದು ಖಂಡನೀಯ. ನೇತ್ರಾವತಿ ತಿರುವು ವಿರೋಧಿ ಚಳುವಳಿ ಬಗ್ಗೆ ನಮ್ಮ ಬೆಂಬಲವಿದೆ ಎಂದರು.
ಕಾರ್ಯಕ್ರಮದಲ್ಲಿ ಪರಿಸರ ವಿಜ್ಞಾನಿ ಗೋಪಾಲಕೃಷ್ಣ ಭಟ್, ಜೈವಿಕ ಶಾಸ್ತ್ರಜ್ಞ ವಿಷ್ಣು ಮಕ್ರಿ ಹಾಗೂ ವಾಗ್ದೇವಿ ಫೌಂಡೇಶನ್‍ನ ಸಿಇಓ ಹರೀಶ್ ಕೃಷ್ಣಮೂರ್ತಿ, ಕೆ.ಕೆ ಇಂಗ್ಲಿಷ್ ಮಿಡಿಯಮ್ ಹೈ ಸ್ಕೂಲ್‍ನ ಶಿಕ್ಷಕಿ ಅಲ್ಲಿ ರಾಣಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್, ಪರಿಸರ ತಜ್ಞ ಸುರೇಶ್ ಹೆಬ್ಳಿಕರ್, ಶಾಸಕ ಅಭಯಚಂದ್ರ ಜೈನ್ ಉಪಸ್ಥಿತರಿದ್ಧರು. ಸಮ್ಮೇಳನದಲಿ ಐಐಎಸ್‍ಸಿ, ಐಐಟಿ ಮತ್ತು ಇನ್ನಿತರ ಶಾಲಾ ಕಾಲೇಜಿನ ಒಟ್ಟು 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Click this button or press Ctrl+G to toggle between Kannada and English