ಬ್ಯಾಂಕ್‌ಗಳಲ್ಲಿ ಖಾತೆಗಳಿಗೆ ಆಧಾರ್ ಲಿಂಕ್ ಕಾರ್ಯ ಡಿ. 31ರೊಳಗೆ ಮುಗಿಸಬೇಕು: ನಳಿನ್ ಕುಮಾರ್

12:06 PM, Friday, December 30th, 2016
Share
1 Star2 Stars3 Stars4 Stars5 Stars
(No Ratings Yet)
Loading...

Nalin Kumar Kateelಮಂಗಳೂರು: ಬ್ಯಾಂಕ್‌ಗಳಲ್ಲಿ ಖಾತೆಗಳಿಗೆ ಆಧಾರ್ ಲಿಂಕ್ ಕಾರ್ಯ ಶೇ. 55ರಷ್ಟು ಮಾತ್ರ ಪೂರ್ಣಗೊಂಡಿದ್ದು, ಉಳಿದ ಲಿಂಕ್ ಕಾರ್ಯವನ್ನು ಡಿ. 31ರೊಳಗೆ ಮುಗಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ಜಿಲ್ಲಾ ಬ್ಯಾಂಕ್‌ಗಳ ಪರಿಶೀಲನಾ ಸಮಿತಿಯಿಂದ ಜಿ ಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಬ್ಯಾಂಕಿಂಗ್ ಅಭಿವೃದ್ಧಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇನ್ನೂ 1 ಲಕ್ಷ ಮಂದಿಯ ಆಧಾರ್ ಲಿಂಕ್ ಕಾರ್ಯ ಬಾಕಿಯಿದೆ. ಇದನ್ನು ತ್ವರಿತಗೊಳಿಸದಿದ್ದರೆ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರ ವೇತನಕ್ಕೆ ಸಮಸ್ಯೆಗಳಾಗುವ ಸಾಧ್ಯತೆಯಿದೆ. ಬ್ಯಾಂಕ್ ಅಧಿಕಾರಿ-ಸಿಬ್ಬಂದಿ ವರ್ಗ ಮಾಡುವ ತಪ್ಪಿನಿಂದ ಜನಸಾಮಾನ್ಯರು ತೊಂದರೆ ಅನುಭವಿಸಬಾರದು. ಹಾಗಾಗಿ ಆದ್ಯತೆ ನೆಲೆಯಲ್ಲಿ ಲಿಂಕ್ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು ಎಂದರು.

ಜಿಲ್ಲೆಯ 230 ಗ್ರಾಪಂಗಳಲ್ಲಿ ಮತ್ತು 368 ಹಳ್ಳಿಗಳು ಡಿಜಿಟಲ್ ಪೇಮೆಂಟ್ ಪ್ರಾರಂಭಿಸುವ ನಿಟ್ಟಿನಲ್ಲಿ ಜ.3ರಿಂದ ಪೂರಕ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಬ್ಯಾಂಕ್‌ಗಳು ಆಧಾರ್, ಯುಪಿಐ, ಪಿಒಐ ಮೂಲಕ ಮಾಡಲಾದ ವ್ಯವಹಾರದ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರಾಘವ ಯಜಮಾನ್ಯ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಡಿಜಿಟಲ್ ಪೇಮೆಂಟ್ ಕುರಿತಂತೆ 200 ಮಂದಿಯ ತಂಡ ರಚಿಸಲಾಗುತ್ತಿದೆ. ಮೊದಲು ಮನೆ-ಮನೆಗಳಲ್ಲಿ ಜಾಗೃತಿ ಮೂಡಿಸಿ ಬಳಿಕ ಅಂಗಡಿಮುಂಗಟ್ಟುಗಳಲ್ಲಿ ಬಳಕೆಗೆ ಮಾಹಿತಿ ನೀಡಲಾಗುತ್ತದೆ. ಬೇರೆ-ಬೇರೆ ಕಾಲೇಜು ವಿದ್ಯಾರ್ಥಿಗಳ ಈ ತಂಡದೊಂದಿಗೆ ಆಯಾಯ ವಿಭಾಗದ ಸಿಬ್ಬಂದಿ ಕೂಡಾ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English