ಮಂಗಳೂರು: ಅಸ್ಸಾಮಿಯಂತಹ ಭಾಷೆಗೆ ನೀಟ್‍ನಲ್ಲಿ ಅವಕಾಶ ಕಲ್ಪಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕನ್ನಡ ಕಡೆಗಣಿಸಿದ್ದು, ಬಿಜೆಪಿಯ ಕನ್ನಡ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿದೆ. ಕನ್ನಡ ಇಲ್ಲದ ನೀಟ್ ಪರೀಕ್ಷೆಯನ್ನು ರಾಜ್ಯ ಸರ್ಕಾರ ಬಹಿಷ್ಕರಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಮುಖಂಡೆ ಶಾಂತಲಾ ದಾಮ್ಲೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‍ನ ಆದೇಶದಂತೆ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಏಕರೂಪ ಪ್ರವೇಶ ಪರೀಕ್ಷೆ ನಡೆಸಲು, ಕೇಂದ್ರ ಸರ್ಕಾರ ನೀಟ್ ಪರೀಕ್ಷೆ ಆಯೋಜಿಸಲು ಮುಂದಾಗಿದೆ.
ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಈ ಪರೀಕ್ಷೆ ನಡೆಸಲು, ಹಲವಾರು ಕಾನೂನಿನ ತಿದ್ದಪಡಿ ಮಾಡಿದ್ದು, ಈ ಮೂಲಕ ನೀಟ್ ಪರೀಕ್ಷೆ ಬರೆಯಲು, ಇಂಗ್ಲಿಷ್ ಅಲ್ಲದೆ, ಇನ್ನೂ 7 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ದೇಶಾದ್ಯಂತ ವಿದ್ಯಾರ್ಥಿಗಳಿಗೆ ಅನುವು ಮಾಡಿದೆ. ತಮಿಳು, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ ಹಾಗೂ ತೆಲುಗು ಭಾಷೆಯಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶವಿದ್ದು, ಕನ್ನಡವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿರುವುದು ಅಕ್ಷಮ್ಯ ಅಪರಾಧವೆಂದರು.
ಇಡೀ ದೇಶದಲ್ಲೇ ಅತೀ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಕರ್ನಾಟಕದಲ್ಲಿ ಸುಮಾರು 50 ವೈದ್ಯಕೀಯ ಕಾಲೇಜುಗಳಿದ್ದು, 7 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸೀಟ್‍ಗಳು ಲಭ್ಯವಿದೆ. ರಾಜ್ಯದಲ್ಲಿ ಸುಮಾರು ಶೇ. 53ರಷ್ಟು ವಿದ್ಯಾರ್ಥಿಗಳು ಕನ್ನಡದಲ್ಲಿ ಹತ್ತನೇ ತರಗತಿಯ ಪರೀಕ್ಷೆಯನ್ನು ಬರೆಯುತ್ತಾರೆ.
ನೀಟ್‍ನಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ರಾಜ್ಯದ ಎಲ್ಲಾ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಮೂಲಕ ಭಾರಿ ಅನ್ಯಾಯವಾಗಲಿದ್ದು, ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಆಶೆ ಹೊಂದಿರುವ ಸಾವಿರಾರು ವಿದ್ಯಾರ್ಥಿಗಳು ಅರ್ಹತೆಯನ್ನು ಹೊಂದಿದ್ದರೂ ಅನ್ಯ ಭಾಷಾ ಪ್ರಯೋಗದ ಅರಿವಿಲ್ಲವೆಂಬ ಏಕೈಕ ಕಾರಣದಿಂದಾಗಿ, ವೈದ್ಯಕೀಯ ಶಿಕ್ಷಣದ ಮೇಲಿನ ನಿರೀಕ್ಷೆಯನ್ನೇ ಕೈಬಿಡುವ ಪರಿಸ್ಥಿತಿ ಉದ್ಬವವಾಗಿದೆ. ಈ ಅನ್ಯಾಯಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಅವರು ಆರೋಪಿಸಿದರು.
Click this button or press Ctrl+G to toggle between Kannada and English