ಬೆಂಗಳೂರು : ಮನಶ್ಯಾಸ್ತ್ರದ ಪದವೀಧರನಾದ ಯೋಗರಾಜ (ನವೀನ್ ಕೃಷ್ಣ) ಜ್ಯೋತಿಷ್ಯ ಮತ್ತು ಲಂಡನ್‌ನಲ್ಲಿ ವ್ಯಾಸಂಗ ಮಾಡಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಸಿಹಿ (ನೀತು) ಇವರಿಬ್ಬರ ಪ್ರೇಮಕತೆಯ ‘ಯೋಗರಾಜ’ ಪುರಾಣ ಕತೆಯ ಸನ್ನಿವೇಷವನ್ನು ನೆನೆಪಿಸುತ್ತದೆ.
ಯೋಗರಾಜ ಮತ್ತು ಸಿಹಿ ಭೇಟಿ ಮಾಡಿ ಪರಿಚಯವಾಗುತ್ತದೆ. ಕಾಲಾನಂತರದಲ್ಲಿ ಯೋಗರಾಜನಿಗೆ ಅವಳಲ್ಲಿ ಮನಸ್ಸಾಗುತ್ತದೆ. ಓರ್ವ ಅನಾಥೆಯಾಗಿರುವ ಸಿಹಿಯಲ್ಲಿ ತನ್ನ ಮನದಾಳದ ಮಾತುಗಳನ್ನು ಯೋಗರಾಜ ಹೇಳಿಕೊಳ್ಳುತ್ತಾನೆ.
ಆದರೆ ಅವಳಿಂದ ಒಪ್ಪಿಗೆಯ ಮಾತು ಕೇಳಬೇಕೆನ್ನುವಷ್ಟರಲ್ಲಿ ಅಪಘಾತವೊಂದರಲ್ಲಿ ಯೋಗರಾಜ ಸಾವಿಗೀಡಾಗುತ್ತಾನೆ. ಅವನ ಪ್ರಾಣವನ್ನು ತೆಗೆದುಕೊಂಡು ಹೋಗಲು ಯಮರಾಜ ಬಂದಾಗ, ತನಗೆ ಮರಳಿ ಜೀವವನ್ನು ನೀಡುವಂತೆ ಯೋಗರಾಜನ ಆತ್ಮ ಕೇಳಿಕೊಳ್ಳುತ್ತದೆ. ಯೋಗರಾಜನಿಗೆ ಅವನ ಜೀವನ ಮತ್ತೊಮ್ಮೆ ಸಿಗುತ್ತದೆ. ಇನ್ನೇನು ಲಂಡನ್‌ನಿಂದ ಮರಳುವ ಸಿಹಿಯೊಂದಿಗೆ ಜೀವನ ಸಾಗಿಸಬೇಕು ಎಂದುಕೊಳ್ಳುವಷ್ಟರಲ್ಲಿ ಅವನಿಗೆ ಮತ್ತೊಂದು ಆಘಾತ ಕಾದಿರುತ್ತದೆ. ಸಿಹಿಯ ಜೀವಾವಧಿ ಅಲ್ಪವಾಗಿದೆ ಎಂದು ಯಮರಾಜ ಹೇಳುತ್ತಾನೆ. ನಂತರದ ಸಂಗತಿಗಳನ್ನು ಬೆಳ್ಳಿತೆರೆಯಲ್ಲಿ ನೋಡಬೇಕು.
ಚಿತ್ರದ ಮೊದಲರ್ಧ ನಿಜಕ್ಕೂ ಲವಲವಿಕೆಯಿಂದ ಕೂಡಿದೆ. ಆದರೆ ಎಡವಟ್ಟಾಗಿರುವುದು ಚಿತ್ರದ ದ್ವಿತೀಯಾರ್ಧದಲ್ಲಿ. ಅತಾರ್ಕಿಕತೆಯಿಂದ ಕೂಡಿರುವ ದ್ವಿತೀಯಾರ್ಧವನ್ನು ಒಪ್ಪಿಕೊಳ್ಳುವುದು ಕಷ್ಟ. ಚಿತ್ರದ ಮೊದಲ ಭಾಗವನ್ನು ಅತೀವ ಆಸ್ಥೆಯಿಂದ ಕಟ್ಟಿಕೊಟ್ಟ ನಿರ್ದೇಶಕ ದಯಾಳ್ ಎರಡನೇ ಭಾಗದಲ್ಲಿ ಏಕೆ ಎಡವಿದರು ಎಂಬುದು ಅರ್ಥವಾಗುವುದಿಲ್ಲ. ಮೇಲಾಗಿ ಯಮರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸುಚೇಂದ್ರ ಪ್ರಸಾದ್ ಪಾತ್ರವು ಚಿತ್ರದ ಪ್ರಚಾರದ ಸಂದರ್ಭದಲ್ಲಿ ಹೇಳಿಕೊಂಡಷ್ಟೇನೂ ಉತ್ತಮವಾಗಿ ರೂಪುಗೊಂಡಿಲ್ಲ ಎಂಬುದು ಬೇಸರದ ಸಂಗತಿ.
ಇನ್ನುಳಿದಂತೆ ನವೀನ್ ಕೃಷ್ಣ ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಅವರಿಗೆ ಸಮರ್ಥ ನಿರ್ದೇಶಕರ ಮಾರ್ಗದರ್ಶನ ಮತ್ತು ಉದ್ಯಮದ ಪ್ರೋತ್ಸಾಹ ದೊರೆತಲ್ಲಿ ಅವರು ಮುಂಬರುವ ದಿನಗಳಲ್ಲಿ ಸ್ಟಾರ್ ಆಗಿ ಹೊರಹೊಮ್ಮಬಲ್ಲ ಎಲ್ಲಾ ಲಕ್ಷಣಗಳೂ ಕಾಣಿಸುತ್ತವೆ. ನೀತು, ಶ್ರೀನಿವಾಸಮೂರ್ತಿ, ಸಿಹಿಕಹಿ ಗೀತಾ ಮತ್ತು ಸಿಹಿಕಹಿ ಚಂದ್ರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವನ್ನು ಒದಗಿಸಿದ್ದಾರೆ. ಮಿಲಿಂದ್ ಧರ್ಮಸೇನರ ಸಂಗೀತ ಖುಷಿಯನ್ನೇನೋ ನೀಡುತ್ತದೆ. ಆದರೆ ಅದಕ್ಕಾಗಿ ಅವರು ಟ್ಯೂನನ್ನು ಹಿಂದಿಯಿಂದ ನೇರವಾಗಿ ಎತ್ತುವ ಅಗತ್ಯವಿರಲಿಲ್ಲ ಎನಿಸುತ್ತದೆ.
ಸಂಭಾಷಣೆ ಈ ಚಿತ್ರದ ಪ್ಲಸ್ ಪಾಯಿಂಟ್‌ಗಳಲ್ಲೊಂದು. ಸಂಭಾಷಣೆಯಲ್ಲೂ ಕೈಯಾಡಿಸಿರುವ ನಟ ನವೀನ್ ಕೃಷ್ಣ ಈ ಕಾರಣಕ್ಕೂ ಅಭಿನಂದನೆಗೆ ಅರ್ಹರಾಗುತ್ತಾರೆ. ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತಷ್ಟು ಹೋಂವರ್ಕ್ ಮಾಡಬೇಕಿತ್ತು.- WD
Click this button or press Ctrl+G to toggle between Kannada and English