ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮದನ್ ಮಾಸ್ತರ್ ಗೆ ನೂರರ ಸಂಭ್ರಮ

3:54 PM, Tuesday, January 3rd, 2017
Share
1 Star2 Stars3 Stars4 Stars5 Stars
(No Ratings Yet)
Loading...

Madan Mastharಮಂಗಳೂರು: ಅಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕರೆ ನೀಡಿದ್ದ ಕ್ವಿಟ್ ಇಂಡಿಯ ಚಳವಳಿಗೆ ದೇಶದ ಯುವಕರು ತಂಡೋಪತಂಡವಾಗಿ ಓಗೊಟ್ಟರೆ, ಮಂಗಳೂರಿನ ಯುವಕನೂ ಹೋರಾಟಕ್ಕೆ ಧುಮುಕಿದ್ದರು. ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರಿಗೆ ಈಗ ನೂರರ ಸಂಭ್ರಮ. ಮಾಸ್ತರಿಕೆ ಮಾಡಿಕೊಂಡಿದ್ದ ಇವರು ಇಡೀ ಊರಿಗೂ ಸಹ ಮಾಸ್ತರ್.

ಹೌದು, ಕೇರಳದ ಕಾಸರಗೋಡು ಜಿಲ್ಲೆಯ ಪೆರ್ಲ ಗ್ರಾಮದ ಮದನ್ ಮಾಸ್ತರ್ ಅವರೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜನರ ಪ್ರೀತಿ, ಗೌರವಕ್ಕೆ ಪಾತ್ರರಾದವರು. ಸ್ವಾತಂತ್ರ್ಯ ಹೋರಾಟದ ಬಳಿಕವೂ ಇವರ ಜನೋಪಯೋಗಿ ಕಾರ್ಯಕ್ಕೆ ಮಾತ್ರ ಮುಕ್ತಾಯ ಎಂಬುದೇ ಇರಲಿಲ್ಲ.

ಕಮ್ಯೂನಿಸ್ಟ್ ಮುಖಂಡರಾಗಿ, ರಾಜಿ ಸಂಧಾನಕಾರರಾಗಿ, ಸಮಸ್ಯೆಗಳ ಇತ್ಯರ್ಥ ಪಡಿಸುವ ಮುಂದಾಳುವಾಗಿ ಜನರ ನಡುವೆ ಗುರುತಿಸಿಕೊಂಡವರು ಮದನ ಮಾಸ್ಟರ್. ಬಿಲ್ಲವರು ಶಾಲೆಗೆ ಸೇರುವುದೇ ಅಸಾಧ್ಯವಾಗಿದ್ದ ಆ ದಿನಗಳಲ್ಲಿ ಮದನ ಪೂಜಾರಿ ಪೆರ್ಲ, ಕಾಸರಗೋಡು, ಮಂಗಳೂರು ಮತ್ತು ಮದ್ರಾಸಿನಲ್ಲಿ ಶಿಕ್ಷಣ ಪಡೆದುಕೊಂಡವರು.

ಜನರ ವಿರೋಧವನ್ನು ಲೆಕ್ಕಿಸದೆ ಊರಿಗೊಂದು ತಮ್ಮದೇ ಖರ್ಚಿನಲ್ಲಿ ಬೆಟ್ಟಗುಡ್ಡಗಳ ನಡುವೆ ರಸ್ತೆ ನಿರ್ಮಿಸಿದರು. ಇಷ್ಟಾದರೂ ಇವರದ್ದೇ ಪಕ್ಷ ಅಧಿಕಾರದಲ್ಲಿದ್ದರೂ ಈ ರಸ್ತೆ ಅಭಿವೃದ್ಧಿಪಡಿಸಿ ಡಾಂಬರ್‌‌ ಹಾಕುವುದು ಸಾಧ್ಯವಾಗಿಲ್ಲ. ಸ್ವತಃ ಕ್ರಿಕೆಟ್, ಕಬಡ್ಡಿ ಮತ್ತು ಮೈಲ್ ರೇಸರ್ (ದೂರ ಓಟಗಾರ) ಆಗಿದ್ದ ಮದನ್ ಮಾಸ್ತರ್ ಕ್ರೀಡಾಳುಗಳಿಗೆ ತರಬೇತಿ ನೀಡುತ್ತಲೇ ಬಂದಿದ್ದಾರೆ.

ಇಂದು ಕೂಡ ಕೃಷಿ ಕೂಲಿ ಕಾರ್ಮಿಕರಿಗೆ ತಾವೇ ಸಂಬಳ ಬಟವಾಡೆ ಮಾಡುವ, ಮಾರುಕಟ್ಟೆಗೆ ಅಡಕೆ, ತೆಂಗು ಮಾರಾಟ ಮಾಡುವ ವ್ಯವಹಾರವನ್ನು ತಾವೇ ಮಾಡುತ್ತಾರೆ. ದೇಶದ ಇಂದಿನ ರಾಜಕೀಯ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ಪಷ್ಟವಾಗಿ ಟಿಪ್ಪಣಿ ಮಾಡುವ ಶಕ್ತಿಯನ್ನು ಹೊಂದಿದ್ದಾರೆ.

ಪಂಜಾಬಿನ ಜಲಂಧರ್, ಬೆಂಗಳೂರು, ಮದ್ರಾಸ್, ಮೆಟ್ಟುಪಾಳ್ಯಂ, ಕೊಡೈಕನಲ್, ತಿರುವನಂತಪುರ, ಕಣ್ಣಾನೂರು ಮುಂತಾದೆಡೆ ರೈಲ್ವೆ ಅರೆ ಸೈನಿಕ ಪಡೆಯಲ್ಲಿ ಕೆಲಸ ಮಾಡಿದವರು. ಊರಿಗೆ ಬಂದಾಗ ಕೋಮು ಸಂಘರ್ಷವನ್ನು ಕಂಡ ಅವರು ಇದರ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸಿದವರು.

ಮದ್ರಾಸ್‌‌‌ನ ವೈಎಂಸಿಎ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಪಡೆದ ಇವರು ಇದೇ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಮಹಾತ್ಮಾ ಗಾಂಧೀಜಿಯವರನ್ನು ಭೇಟಿಯಾಗಿ ರಾಜಕೀಯ ವಿದ್ಯಮಾನದ ಬಗ್ಗೆ ಚರ್ಚಿಸಿದ್ದರು. ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಇಂಗ್ಲಿಷ್ ಮತ್ತು ದೈಹಿಕ ಶಿಕ್ಷಕರಾಗಿ 19 ವರ್ಷ ಸೇವೆ ಸಲ್ಲಿಸಿ ತನ್ನ ಶಿಷ್ಯನಿಗೆ ಕೆಲಸ ದೊರೆಯಲೆಂದು ಕೆಲಸಕ್ಕೆ ರಾಜೀನಾಮೆ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರದ ಪಿಂಚಣಿಯನ್ನು, ಟೀಚರ್ಸ್‌ ಭವಿಷ್ಯನಿಧಿ ಹಣವನ್ನು ಪಡೆದುಕೊಳ್ಳಲಿಲ್ಲ.

ಮದನ್ ಮಾಸ್ತರ್ ಅವರ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆ ತಿಳಿದುಕೊಂಡ ಅಂದಿನ ಕೇರಳ ಮುಖ್ಯಮಂತ್ರಿ ಇ.ಎಂ.ಎಸ್. ನಂಬೂದಿರಿಪಾಡ್ ಹಾಗೂ ಆಗಿನ ಸಂಸದ ಎ.ಕೆ. ಗೋಪಾಲನ್ ಪೆರ್ಲ ಶಾಲೆಗೆ ಭೇಟಿ ನೀಡಿ ಮದನ್ ಅವರನ್ನ ಸನ್ಮಾನಿಸಿದ್ದರು.

ಮದನ್ ಮಾಸ್ಟರ್ ರಾಜಿ ಪಂಚಾಯತಿಯಲ್ಲಿ ಇವರು ಎತ್ತಿದ ಕೈ. ಸಾವಿರಾರು ಭೂಮಿ ಮತ್ತು ಇತರ ಯಾವುದೇ ವ್ಯಾಜ್ಯಗಳನ್ನು ಕಾನೂನು ಸಮ್ಮತ ಮತ್ತು ನ್ಯಾಯ ಪರವಾಗಿ ಇತ್ಯರ್ಥ ಮಾಡುತ್ತಿದ್ದರು. ಕೇರಳ ಮತ್ತು ಕರ್ನಾಟಕ ಹೈಕೋರ್ಟ್‌ ಸೇರಿದಂತೆ ನ್ಯಾಯಾಲಯಗಳಲ್ಲಿದ್ದ ಹಲವಾರು ಪ್ರಕರಣಗಳನ್ನು ನ್ಯಾಯಾಲಯದ ಹೊರಗಡೆ ಇತ್ಯರ್ಥ ಮಾಡಿದ್ದರು.

ಎರಡು ದಶಕಗಳ ಕಾಲ ಮಂಜೇಶ್ವರ ವಲಯದ ಕೃಷಿಕ ಸಂಘಟನೆಯ ನಾಯಕತ್ವ ವಹಿಸಿದ್ದರು. ಪೆರ್ಲ ಸಹಕಾರಿ ಸಂಘ ಸ್ಥಾಪಿಸಿ, ಮುಂದೆ ಅದು ಬ್ಯಾಂಕ್ ಆಗಿ ಅಭಿವೃದ್ಧಿಯಾಗುವವರೆಗೆ ದುಡಿದರು. ಕೃಷಿಕನಾಗಿ ಸ್ವಾವಲಂಬಿ ಜೀವನ ನಡೆಸಿದ ಮದನ್‌‌ ಮಾಸ್ತರರಿಗೆ ಮಂಜೇಶ್ವರ ತಾಲೂಕಿನ ಪೆರ್ಲದ ಶಂಕರ ಸದನ ಸಭಾಂಗಣದಲ್ಲಿ ಸೋಮವಾರ ಸನ್ಮಾನ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ಟಿ.ಕೆ. ಹಂಸ, ವಿನಯಕುಮಾರ್ ಸೊರಕೆ, ಮಂಜೇಶ್ವರದ ಶಾಸಕ ಅಬ್ದುಲ್ ರಜಾಕ್, ಮಾಜಿ ಶಾಸಕ ಸಿ.ಹೆಚ್. ಕುಂಞಂಬು, ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಪಿ. ಸತೀಶ್ಚಂದ್ರನ್ ಇತರರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English