ಮಂಗಳೂರು : ಚೆನ್ನೈನ ಎಸ್.ಆರ್.ಎಮ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಡಿ. 31ರಿಂದ ಜ. 2ರವರೆಗೆ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಸಾಧನೆ ತೋರಿದ ಮಂಗಳೂರು ವಿ.ವಿ ವನಿತೆಯರು ಹ್ಯಾಟ್ರಿಕ್ ಪ್ರಶಸ್ತಿ ಗಳಿಸುವಲ್ಲಿ ಸಫಲರಾಗಿದ್ದಾರೆ.
ದಾಖಲೆಯ ಸತತ 13ನೇ ಬಾರಿ ಅಖಿಲ ಭಾರತ ವಿ.ವಿ ಚಾಂಪಿಯನ್ ಶಿಪ್‌ಗೆ ಅರ್ಹತೆ ಗಳಿಸಿದ ಮಂಗಳೂರು ವಿ.ವಿಯು ಲೀಗ್ ಹಂತದ ಪಂದ್ಯಗಳಲ್ಲಿ ತಮಿಳುನಾಡಿನ ಬಿ.ಎಸ್.ಎ.ಆರ್. ವಿ.ವಿಯನ್ನು ಹಾಗೂ ಮದ್ರಾಸ್ ವಿ.ವಿ ತಂಡಗಳನ್ನು ನೇರ ಸೆಟ್‌ಗಳಿಂದ ಸೋಲಿಸಿ ಅಂತಿಮ ಹಣಾಹಣಿಯಲ್ಲಿ ಅತಿಥೇಯ ಎಸ್.ಆರ್.ಎಮ್ ವಿ.ವಿ ಯನ್ನು 35-23 ಹಾಗೂ 35-28 ನೇರ ಸೆಟ್‌ಗಳಿಂದ ಸೋಲಿಸಿ ಸತತ 3ನೇ ಬಾರಿ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದೆ.
ಇದೇ ಟೂರ್ನಿಯ ಪುರುಷರ ವಿಭಾಗದಲ್ಲಿ ಕಳೆದ ಬಾರಿ ಚಾಂಪಿಯನ್ ಆಗಿದ್ದ ಮಂಗಳೂರು ವಿ.ವಿ ಲೀಗ್ ಹಂತದಲ್ಲಿ ಉತ್ತಮ ಸಾಧನೆ ತೋರಿದರೂ ನಿರ್ಣಾಯಕ ಪಂದ್ಯದಲ್ಲಿ ಅತಿಥೇಯ ಎಸ್.ಆರ್.ಎಮ್ ವಿ.ವಿ ವಿರುದ್ಧ 35-28 , 28-35 ಹಾಗೂ 31-35ರ ಪ್ರಬಲ ಹೋರಾಟದಲ್ಲಿ ಪರಾಭವಗೊಂಡು ರನ್ನರ್ ಆಫ್ ಪ್ರಶಸ್ತಿಗೆ ತೃಪ್ತಿಗೊಂಡಿತು.
ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ ಪುರುಷರ ಹಾಗೂ ಮಹಿಳೆಯರ ವಿಭಾಗದ ಎಲ್ಲಾ ಆಟಗಾರರು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ವಿ.ವಿ ಬಾಲ್ ಬ್ಯಾಡ್ಮಿಂಟನ್ ತಂಡದ ಅಮೋಘ ಸಾಧನೆಗಾಗಿ ವಿ.ವಿ ಕುಲಪತಿಗಳಾದ ಪ್ರೊ. ಬೈರಪ್ಪ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಮ್. ಮೋಹನ ಆಳ್ವ ಹಾಗೂ ವಿ.ವಿ ದೈಹಿಕ ಶಿಕ್ಷಣ ನಿದೇರ್ಶಕ ಡಾ. ಕಿಶೋರ್ ಕುಮಾರ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English