ಮಂಗಳೂರು: ಎತ್ತಿನಹೊಳೆ ಯೋಜನೆಗೆ ಬಿಜೆಪಿ ಬೆಂಬಲವಿದೆ ಎಂದು ಬಿಎಸ್ವೈ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಯಡಿಯೂರಪ್ಪ ಏನು ಹೇಳಿದ್ದಾರೆ ಎನ್ನುವುದು ನಂಗೆ ಗೊತ್ತಿಲ್ಲ. ಆದರೆ ಎತ್ತಿನ ಹೊಳೆ ಯೋಜನೆಯಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು ಎಂದು ಹೇಳಿದರು.
ಇಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ನಾನು ಯಡಿಯೂರಪ್ಪರ ಜತೆ ಮಾತನಾಡುತ್ತೇನೆ. ಕಳೆದ ವರ್ಷ ಬೇಸಿಗೆಯಲ್ಲಿ ಮಂಗಳೂರಿನ ಜನತೆ ನೀರಿನ ಸಮಸ್ಯೆಯಿಂದ ಬಳಲಿದ್ದಾರೆ. ಜೀವನದಿ ನೇತ್ರಾವತಿ ಬತ್ತಿ ಹೋಗಬಾರದು ಎಂಬುದು ನಮ್ಮ ಆಶಯ ಎಂದರು.
ಬಳಿಕ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ನಾನು ನೀಡಿದ ಹೇಳಿಕೆಯ ವಿವಾದ ಸಮಾಪ್ತಿಗೊಳಿಸಿದ್ದೇನೆ. ನನ್ನ ಮೇಲೆ ಎಫ್ಐಆರ್ ದಾಖಲಾಗಿರುವ ಸಂಬಂಧ ಕಾನೂನು ಹೋರಾಟ ನಡೆಸುತ್ತೇನೆ ಎಂದರು.
ಎತ್ತಿನಹೊಳೆ ವಿಚಾರದಲ್ಲಿ ರಾಜ್ಯ ಮತ್ತು ಜಿಲ್ಲಾ ಬಿಜೆಪಿ ನಾಯಕರಲ್ಲಿ ಯಾವುದೇ ಗೊಂದಲವಿಲ್ಲ. ಯೋಜನೆಯ ಬಗ್ಗೆ ಅಧ್ಯಯನ ತಂಡ ರಚಿಸಿ ಎಂಬುದು ನಮ್ಮ ಬೇಡಿಕೆಯಾಗಿದ್ದು, ಯಡಿಯೂರಪ್ಪ ಜೊತೆ ಮಾತನಾಡಿ ಅವರ ಮನವೊಲಿಸುವುದಾಗಿ ಸಂಸದರು ಹೇಳಿದ್ದಾರೆ.
Click this button or press Ctrl+G to toggle between Kannada and English