ಮಂಗಳೂರು ಪೊಲೀಸರ ಗಸ್ತಿಗೆ 25 ಹೈಟೆಕ್ ಹೊಯ್ಸಳ ವಾಹನಗಳ ಸೇರ್ಪಡೆ

12:38 PM, Friday, January 13th, 2017
Share
1 Star2 Stars3 Stars4 Stars5 Stars
(No Ratings Yet)
Loading...

police-car ಮಂಗಳೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಗರದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ 25 ಹೈಟೆಕ್ ಹೊಯ್ಸಳ ವಾಹನಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಈಗಾಗಲೇ 13 ವಾಹನಗಳು ದಿನದ 24 ಗಂಟೆಯೂ ಗಸ್ತಿನಲ್ಲಿದ್ದು, ಇದೀಗ ಮತ್ತಷ್ಟು ವಾಹನಗಳು ಬಂದಿರುವುದರಿಂದ ಮಂಗಳೂರಿನ ಪೊಲೀಸರಿಗೆ ಬಲ ಬಂದಿದೆ.

ಜೊತೆಗೆ ಎಸ್ಪಿ ವ್ಯಾಪ್ತಿಗೂ ಎರಡು ವಾಹನಗಳು ಬಂದಿದ್ದು, ಮುಂದಿನ ತಿಂಗಳಿನಿಂದ ಜಿಲ್ಲೆಯಲ್ಲೂ ಅದು ಕಾರ್ಯನಿರ್ವಹಿಸಲಿದೆ. ಹೈಟೆಕ್ ಮಾದರಿಯ ಹೊಯ್ಸಳ ಬೆಂಗಳೂರಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ 322 ವಾಹನಗಳು ಓಡಾಡುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಕಮಿಷನರೇಟ್ ವ್ಯಾಪ್ತಿಯ ನಗರಗಳಲ್ಲಿ ಹೆಚ್ಚಿನ ಹೊಯ್ಸಳ ವಾಹನಗಳು ಸಂಚರಿಸಲಿವೆ.

ಈ ಬಗ್ಗೆ ಮಾತನಾಡಿದ ಅವರು, ಅಪರಾಧ, ಅಪಘಾತಗಳನ್ನು ನಿಯಂತ್ರಿಸಲು ಹಾಗೂ ಆಧುನಿಕ ಪೊಲೀಸ್ ಗಸ್ತು ವ್ಯವಸ್ಥೆ (ಸ್ಟ್ರೀಟ್ ಬೀಟ್) ಪರಿಣಾಮಕಾರಿಗೊಳಿಸುವಲ್ಲಿ ಹೈಟೆಕ್ ವಾಹನಗಳು ಸಜ್ಜಾಗಿವೆ. ಅದರಲ್ಲೂ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗಂತೂ ವಿಶೇಷ ಭದ್ರತೆ ಸಿಗಲಿದೆ. ನಗರದ ಪ್ರತಿಯೊಂದು ಮನೆಯ ಮೇಲೂ ವಿಶೇಷ ಕಣ್ಣಿಡುವ ಸ್ಟ್ರೀಟ್ ಬೀಟ್ ಪೊಲೀಸರು ತಮ್ಮ ಕಾರ್ಯವನ್ನು ಸಶಕ್ತಗೊಳಿಸಲು ಈ ವಾಹನ ಸಹಕಾರಿಯಾಗಲಿದೆ.

ಒಂದೊಂದು ಠಾಣೆಗೂ ಒಂದೊಂದು ವಿಶೇಷ ವಾಹನ ಲಭಿಸಲಿದ್ದು, ಪ್ರತೀ ವಾಹನದಲ್ಲಿ ಇಬ್ಬರು ಸಿಬಂದಿ ಇರಲಿದ್ದಾರೆ. ಈ ವಾಹನದಲ್ಲಿ ಮೂರು ಪಾಳಿಗಳಲ್ಲಿ ಒಟ್ಟು ನಾಲ್ಕು ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರೂ ಕೂಡ ಈ ವಾಹನಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಾಗರಿಕರ ರಕ್ಷಣೆಗೆ ಹೆಚ್ಚಿನ ಬೆಲೆ ನೀಡುವ ನಿಟ್ಟಿನಲ್ಲಿ ಇದು ಕಾರ್ಯವಹಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಸ್ಟ್ರೀಟ್ ಬೀಟ್‌ನ ಪ್ರಾಮುಖ್ಯತೆಯನ್ನು ವಿವರಿಸಿದ ಅವರು, ಕಲಬುರಗಿ ಪ್ರಕರಣದ ಬಗ್ಗೆ ನಡೆದಷ್ಟು ತನಿಖೆ ಇತಿಹಾಸದಲ್ಲೇ ಯಾವುದೇ ಪ್ರಕರಣದಲ್ಲೂ ನಡೆದಿಲ್ಲ. ಆದರೂ, ಈವರೆಗೆ ಅವರ ಹತ್ಯೆ ಪ್ರಕರಣವನ್ನು ಭೇದಿಸಲಾಗಿಲ್ಲ. ಕಾರಣ ಅವರಿಗೆ ಜೀವ ಬೆದರಿಕೆ ಇರುವುದೇ ಯಾರೊಬ್ಬರಿಗೂ ಗೊತ್ತಿಲ್ಲದೆ ಹೋಗಿದ್ದು. ಎಷ್ಟೋ ಬಾರಿ ಸಾಹಿತಿಗಳು ಅಥವಾ ಪ್ರಭಾವಿ ವ್ಯಕ್ತಿಗಳು ಇಂತಹ ಬೆದರಿಕೆಗೊಳಗಾಗಿರುತ್ತಾರೆ. ಅದು ಸ್ಟ್ರೀಟ್ ಬೀಟ್ ಪೊಲೀಸರ ಗಮನಕ್ಕೆ ಬಂದರೆ ಖಂಡಿತವಾಗಿಯೂ ಅವರಿಗೆ ರಕ್ಷಣೆ ದೊರೆಯಲು ಕಷ್ಟವಾಗುವುದಿಲ್ಲ ಎಂದರು.

ಉತ್ತಮ ಗುಣಮಟ್ಟದ ವಾಟರ್‌ಪ್ರೂಫ್, ಶಾಕ್ ಪ್ರೂಫ್ ಮತ್ತು ಡಸ್ಟ್ ಪ್ರೂಫ್ ತಂತ್ರಜ್ಞಾನವನ್ನೊಳಗೊಂಡಿವೆ. ವಾಹನಗಳು ಸುಲಭ ಮತ್ತು ವೇಗವಾಗಿ ಘಟನಾ ಸ್ಥಳಗಳಿಗೆ ತಲುಪಲು ಅನುಕೂಲವಾಗುವ ಮಧ್ಯಮ ಗಾತ್ರದ ಮಾರುತಿ ಎರ್ಟಗಾ ವಾಹನ ಬಳಕೆ ಮಾಡಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English