ನೋಟ್ ರದ್ಧತಿ ಮೋದಿ ಸರ್ಕಾರದ ಏಕಾಏಕಿ ನಿರ್ಧಾರವಲ್ಲ : ನಿರ್ಮಲಾ ಸೀತಾರಾಮನ್

12:48 PM, Friday, January 13th, 2017
Share
1 Star2 Stars3 Stars4 Stars5 Stars
(No Ratings Yet)
Loading...

nirmalaಮಂಗಳೂರು : ಚೀನಿ ಉತ್ಪನ್ನಗಳನ್ನು ನಿಷೇಧಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಆದರೆ  ಅಲ್ಲಿನ ಉತ್ಪನ್ನಗಳನ್ನು ತಕ್ಷಣಕ್ಕೆ ನಿಷೇಧಿಸಲು ಸಾಧ್ಯವಾಗದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಅಪನಗದೀಕರಣ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ಪಾಕಿಸ್ತಾನ ವೈರಿ ರಾಷ್ಟ್ರವಾದರೂ ಚೀನಾ ಆರ್ಥಿಕತೆಯಲ್ಲಿ ಹೊಡೆತ ನೀಡುವ ರಾಷ್ಟ್ರವಾಗಿದೆ. ಅಲ್ಲಿನ ಕಳಪೆ ಉತ್ಪನ್ನಗಳು ಕಡಿಮೆ ದರಕ್ಕೆ ಭಾರತದಲ್ಲಿ ಮಾರಾಟವಾಗುತ್ತಿವೆ. ಆದ್ದರಿಂದ ಚೀನಿ ಉತ್ಪನ್ನಗಳನ್ನು ನಿಷೇಧಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಕಳಪೆ ಗುಣಮಟ್ಟದ ಉತ್ಪನ್ನಗಳಾದರೆ ಅಂತಹ ಉತ್ಪನ್ನಗಳ ಮೇಲೆ ಹೆಚ್ಚಿನ ಆಮದು ತೆರಿಗೆಯನ್ನು ವಿಧಿಸಬಹುದು. ಕೆಲವೊಮ್ಮೆ ಕಡಿಮೆ ದರಕ್ಕೆ ಸಿಗುವ ಉತ್ಪನ್ನಗಳನ್ನು ಜನರು ಬಯಸುತ್ತಾರೆ. ಇಂತಹ ಸಂದರ್ಭಗಳಲ್ಲಿ ತಕ್ಷಣಕ್ಕೆ ಕ್ರಮ ಕೈಗೊಳ್ಳುವುದು ಅಸಾಧ್ಯ. ಇದಾಗ್ಯೂ ತೀರಾ ಗುಣಮಟ್ಟ ಹಾಗೂ ಆರೋಗ್ಯಕ್ಕೆ ಮಾರಕವಾಗುವುದಿದ್ದಲ್ಲಿ ಅದರ ನಿಷೇಧಕ್ಕೆ ಭದ್ರತಾ ನಿಗಾ ಖಂಡಿತಾ ಇದೆ ಎಂದರು.

ನೋಟ್ ರದ್ಧತಿ ಮೋದಿ ಸರ್ಕಾರದ ಏಕಾಏಕಿ ನಿರ್ಧಾರವಲ್ಲ. ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಯುಪಿಎ ಸರ್ಕಾರ ಇರುವಾಗಲೇ ಸೂಚನೆ ನೀಡಿದೆ. ಆಗ ದೇಶದ ಅತ್ಯುನ್ನತ ಸಂಸ್ಥೆಯಾದ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಗೌರವ ನೀಡದ ಕಾಂಗ್ರೆಸ್ ಈಗ ಸಂಸ್ಥೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಬೊಬ್ಬಿಡುತ್ತಿದೆ ಎಂದು ವಿಡಂಬನೆ ಮಾಡಿದರು.

ಸ್ವಿಟ್ಜರ್‌‌ಲ್ಯಾಂಡ್ ಜೊತೆಗಿನ ಒಪ್ಪಂದದ ಪ್ರಕಾರ 2018ರಲ್ಲಿ ಅಲ್ಲಿರುವ ಭಾರತೀಯರ ಕಪ್ಪು ಹಣದ ಪಟ್ಟಿ ಸಿದ್ಧಗೊಳಿಸಿ ಭಾರತಕ್ಕೆ ತಿಳಿಸಲಿದೆ. ಹಾಗಾಗಿ ಈ ವಿಚಾರದಲ್ಲಿ ಪ್ರತಿಪಕ್ಷಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದರು.

ಚುನಾವಣಾ ಪ್ರಚಾರಾರ್ಥವಾಗಿ ಅಂದು ಎಲ್.ಕೆ. ಅಡ್ವಾಣಿ ರಥಯಾತ್ರೆ ಮಾಡಿದಾಗ ಕಪ್ಪುಹಣಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದ್ದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಕ್ರಮ ಕೈಗೊಂಡಿದೆ. ಈ ನೋಟುಗಳ ನಿಷೇಧದಿಂದ ಕಪ್ಪು ಹಣ ವಾಪಸಿಗೆ ಅನುಕೂಲವಾಗಿದೆ. ಉಗ್ರ ಚಟುವಟಿಕೆ, ನಕ್ಸಲ್ ನಿಗ್ರಹ, ಡ್ರಗ್ಸ್ ಮಾಫಿಯಾ ತಡೆಗಟ್ಟಲು ಸಾಧ್ಯವಾಗಿದೆ. ಮುಖ್ಯವಾಗಿ ದೇಶದ ಆರ್ಥಿಕ ತಳಹದಿಯನ್ನು ಭದ್ರಪಡಿಸಲು, ದೇಶದ ಜಿಡಿಪಿ, ಕರೆನ್ಸಿಗಳ ಪಾರದರ್ಶಕ ವಹಿವಾಟಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English