ಕಲಾ ಪೋಷಕರಿಂದ ಕಲೆ ವಿಸ್ತಾರಗೊಂಡು ಬಹುಮುಖಿ ವ್ಯಾಪ್ತಿ ಪಡೆದಿದೆ : ಚಂಬಲ್ತಿಮಾರ್

1:49 PM, Monday, January 16th, 2017
Share
1 Star2 Stars3 Stars4 Stars5 Stars
(No Ratings Yet)
Loading...

chambaltimarಬದಿಯಡ್ಕ: ರಂಗ ಪ್ರಸ್ತುತಿಯ ಪ್ರತಿಭೆಯನ್ನು ಗುರುತಿಸಿ ಕಲಾವಿದನನ್ನು ಅಳೆಯಬೇಕೇ ಹೊರತು ಬೇರೊಂದು ದೃಷ್ಟಿಯಿರಬಾರದು. ಅಂತಹ ವ್ಯಕ್ತಿತ್ವಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದಾರತೆ ಕಲಾಪೋಷಕರಿಗಿರಬೇಕು. ಕಲಾ ಪೋಷಕರಿಂದ ಕಲೆ ವಿಸ್ತಾರಗೊಂಡು ಬಹುಮುಖಿ ವ್ಯಾಪ್ತಿ ಪಡೆಯುತ್ತದೆಯೆಂದು ಕಣಿಪುರ ಯಕ್ಷಗಾನ ಮಾಸಿಕದ ಸಂಪಾದಕ ಎಂ.ನಾ ಚಂಬಲ್ತಿಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನೀರ್ಚಾಲಿನ ದಿ.ಪರಮೇಶ್ವರ ಆಚಾರ್ಯ ಸ್ಮಾರಕ ಕಲಾ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ಅಪರಾಹ್ನ ನೀರ್ಚಾಲು ಶ್ರೀ ಕುಮಾರ ಸ್ವಾಮಿ ಸಭಾಂಗಣದಲ್ಲಿ ನಡೆದ ಪರಮೇಶ್ವರ ಆಚಾರ್ಯರ 14ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ, ಅಭಿನಂದನಾ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣಗೈದು ಅವರು ಮಾತನಾಡುತ್ತಿದ್ದರು.

ಕಲಾಪ್ರೇಮಿ, ಕಲಾವಿದ ಮತ್ತು ಕಲಾಪೋಷಕನಾಗಿ ಸಾಂಸ್ಕೃತಿಕ ಯುವ ನೆಲೆಗಟ್ಟೊಂದರ ರೂಪೀಕರಣದಲ್ಲಿ ಅಳಿದುಹೋದ ಅದೆಷ್ಟೋ ಜನರು ಅಚ್ಚಳಿಯದ ಪ್ರಭಾವ ಬೀರಿದ್ದಾರೆ ಎಂದು ತಿಳಿಸಿದ ಅವರು ದಿ.ಪರಮೇಶ್ವರ ಆಚಾರ್ಯರು ಅಪೂರ್ವರಾದ ಒಬ್ಬ ವ್ಯಕ್ತಿ ಎಂದು ಬಣ್ಣಿಸಿದರು. ಕಳೆದ ವರ್ತಮಾನದ ಅರಿವಿನೊಂದಿಗೆ ಪ್ರಸ್ತುತ ಕಾಲಮಾನವನ್ನು ಕಂಡುಕೊಂಡಾಗ ವಿಷಯಗಳ ಆಳ,ವಿಸ್ತಾರತೆ ಅರಿವಿಗೆ ಬಂದು ಇಂದಿನ ಕರ್ತವ್ಯದ ಬಗೆಗಿನ ಜ್ಞಾನ ಪ್ರಾಪ್ತವಾಗುತ್ತದೆ ಎಂದು ತಿಳಿಸಿದರು.ಯಕ್ಷಗಾನ ಇಂದು ಹಲವು ಸ್ಥಿತ್ಯಂತರಗಳ ಮಧ್ಯೆ ಬೆಳೆಯುತ್ತಿದ್ದರೂ ಶಾಸ್ತ್ರೀಯತೆ,ಪರಂಪರೆಯ ಉಳಿಸುವಿಕೆಯ ಕೂಗು ಕೇಳಿ ಬರುತ್ತಿದೆ. ಉತ್ಸಾಹ,ಪ್ರೋತ್ಸಾಹಗಳ ಮಧ್ಯೆ ಮೂಲ ಕಲೆಗೆ ಧಕ್ಕೆಯಾಗದ ಜಾಗೃತಿ ನಮ್ಮಲ್ಲಿರಲೆಂದು ಅವರು ತಿಳಿಸಿದರು.

ಮಧೂರು ಶ್ರೀ ಕಾಳಿಕಾಂಬಾ ಮಠದ ಮಾಜಿ ಅಧ್ಯಕ್ಷ ಮೋಹನ ಆಚಾರ್ಯ ಮಾಕೂರು ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ ಹವ್ಯಾಸಿ ಯುವ ಭಾಗವತ ಉಂಡೆಮನೆ ಕೃಷ್ಣ ಭಟ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು.

ಮೊದಲಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಮುಖರಾದ ನಾ.ದಾಮೋದರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರದ ಸಂಸ್ಕೃತಿ ಸಂವರ್ಧನೆಯಲ್ಲಿ ಕಲೆ,ಕಲಾವಿದನ ಪಾತ್ರ ಹಿರಿದಾದುದು ಎಂದು ತಿಳಿಸಿದರು.ಕನ್ನಡ ಪ್ರದೇಶದಲ್ಲಿ ರಾಮಾಯಣ,ಮಹಾಭಾರತದಂತಹ ಪ್ರಾಚೀನ ಪುರಾಣಗಳ ಒಳನೋಟಗಳನ್ನು ತೆರೆದಿಟ್ಟು ಮರ್ಮವನ್ನು ಅರ್ಥೈಸುವಲ್ಲಿ ಯಕ್ಷಗಾನ ಪ್ರಕಾರ ಮಹತ್ತರವಾದ ಕಾರ್ಯ ನಿರ್ವಹಿಸಿದೆ ಎಮದು ತಿಳಿಸಿದರು.
ಸುಬ್ರಾಯ ಆಚಾರ್ಯ ಸ್ವಾಗತಿಸಿ,ಸೀತಾರಾಮ ಆಚಾರ್ಯ ವಂದಿಸಿದರು.ರಾಜಾರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರಿಂದ ಭೀಷ್ಮಾರ್ಜುನ ಪ್ರಸಂಗದ ತಾಳಮದ್ದಳೆ ಕೂಟ ನಡೆಯಿತು.ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ್ ಭಟ್,ಉದಯ ಕಂಬಾರ್ ಹಾಗು ರಾಮಮೂರ್ತಿ ಕುದ್ರೆಕ್ಕೋಡ್ಲು ಸಹಕರಿಸಿದರು.ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್,ಉಜಿರೆ ಅಶೋಕ್ ಭಟ್ ಮತ್ತು ಸದಾಶಿವ ಆಳ್ವ ತಲಪ್ಪಾಡಿ ಪಾತ್ರಗಳನ್ನು ಪ್ರಸ್ತುತಪಡಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English