ಕೊರಗರ ಸರಿಪಳ್ಳದ ನಿವೇಶನ ಸ್ಥಳ ಸಮತಟ್ಟುಗೊಳಿಸಲು ಸಿಪಿಐ(ಎಂ) ಪ್ರತಿಭಟನೆ

12:04 AM, Tuesday, January 24th, 2017
Share
1 Star2 Stars3 Stars4 Stars5 Stars
(No Ratings Yet)
Loading...

Koragaruಮಂಗಳೂರು: ಹೆದ್ದಾರಿ ನಿರ್ಮಾಣಕ್ಕೆ ಒಕ್ಕಲೆಬ್ಬಿಸಿದ  ಕೊರಗ ಕುಟುಂಬಗಳಿಗೆ ನೀಡಲಾಗಿರುವ ಪದವು ಸರಿಪಳ್ಳದ ನಿವೇಶನ ಸ್ಥಳ ಸಮತಟ್ಟುಗೊಳಿಸಬೇಕೆಂದು ಹಾಗೂ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಪಾಲಿಕೆಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸದಸ್ಯರು, ಸಿಪಿಐ(ಎಂ)  ನಗರದ ಮೂಲನಿವಾಸಿ ಎಂಟು ಕೊರಗ ಕುಟುಂಬದ ಸದಸ್ಯರುಗಳನ್ನು ಬೀದಿಪಾಲು ಮಾಡಿದ ಮಹಾನಗರ ಪಾಲಿಕೆಗೆ ಧಿಕ್ಕಾರ, ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಿರಿ, ಕೊರಗ ಕುಟುಂಬಗಳಿಗೆ ಮನೆ ಒದಗಿಸಿರಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್,   ಮಾತನಾಡಿ ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಸಮುದಾಯದ ಎಂಟು ಕುಟುಂಬಗಳನ್ನು ಆರು ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ನೆಪದಲ್ಲಿ ಎತ್ತಂಗಡಿ ಮಾಡಲು ಆಗಮಿಸಿದ ಅಧಿಕಾರಿಗಳು ದಬ್ಬಾಳಿಕೆಯನ್ನೇ ನಡೆಸಿದ್ದರು ಎಂದು ದೂರಿದರು.

ಅದರ ವಿರುದ್ಧ ಪ್ರಬಲ ಹೋರಾಟ ಮಾಡಿದ್ದರ ಫಲವಾಗಿ ಸಂತ್ರಸ್ತ ಕುಟುಂಬಗಳಿಗೆ ನಗರದಲ್ಲೇ ನಿವೇಶನ ನೀಡಿ ಮನೆ ನಿರ್ಮಿಸಿಕೊಡುವ ಭರವಸೆಯನ್ನು ಮನಪಾ ಹಾಗೂ ಜಿಲ್ಲಾಡಳಿತ ನೀಡಿತ್ತು. ಆದರೆ ಆರು ವರ್ಷಗಳ ನಂತರ ಕಿಂಚಿತ್ತೂ ಗಮನ ನೀಡದೇ ಇದ್ದಾಗ ಮತ್ತೆ ಪ್ರಬಲ ಹೋರಾಟ ನಡೆಸಿದಾಗ ಸರಿಪಳ್ಳದಲ್ಲಿ ನಿವೇಶನ ಹಾಗೂ ಹಕ್ಕುಪತ್ರ ನೀಡಲಾಯಿತು.

ಆ ಸ್ಥಳವನ್ನು ಸಮತಟ್ಟು ಮಾಡಿಕೊಡಬೇಕು, ಕುಡಿಯುವ ನೀರಿನ ಸಂಪರ್ಕ ಒದಗಿಸಬೇಕೆಂದು ಕಳೆದ ಒಂದು ವರ್ಷದಿಂದ ಮನಪಾಕ್ಕೆ ಮನವಿ ಅರ್ಪಿಸಿದರೂ ಯಾವುದೇ ಸ್ಪಂದನೆಯಿಲ್ಲ. ದಿನ ಬೆಳಗಾದರೆ ಆದಿವಾಸಿಗಳ ಬಗ್ಗೆ ಕೇವಲ ಭರವಸೆಗಳನ್ನು ನೀಡುವ ಸರಕಾರಗಳು, ಅವರ ನಿರ್ಧಿಷ್ಟ ಪ್ರಶ್ನೆಗಳು ಬಂದಾಗ ಎಳ್ಳಷ್ಟೂ ಸ್ಪಂದಿಸುವುದಿಲ್ಲ ಎಂಬುದಕ್ಕೆ ನಂತೂರಿನ ಕೊರಗ ಕುಟುಂಬಗಳೇ ಸಾಕ್ಷಿಯಾಗಿದೆ. ಆದಷ್ಟೂ ಶೀಘ್ರದಲ್ಲಿ ಮನೆ ನಿರ್ಮಾಣ ಹಾಗೂ ಅಲ್ಲಿನ ಸ್ಥಳವನ್ನು ಸಮತಟ್ಟುಗೊಳಿಸಲು ಮನಪಾ ಮುಂದಾಗದಿದ್ದಲ್ಲಿ ಮೇಯರ್, ಆಯುಕ್ತರ ಕಚೇರಿಗೆ ಮುತ್ತಿಗೆ, ಉಪವಾಸ ಸತ್ಯಾಗ್ರಹ ಮುಂತಾದ ತೀವ್ರ ತರದ ಹೋರಾಟಗಳನ್ನು ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ನಾಯಕರಾದ ಕೃಷ್ಣಪ್ಪ ಕೊಂಚಾಡಿ, ಸಿಪಿಐ(ಎಂ) ದ.ಕ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಸಿಪಿಐ(ಎಂ) ಜಿಲ್ಲಾ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಜೆ. ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English