ಮಂಗಳೂರು: ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಕಂಬಳವನ್ನು ಉಳಿಸುವ ಸಲುವಾಗಿ ಜ. 28ರಂದು ಮೂಡಬಿದ್ರೆಯಲ್ಲಿ ನಡೆಯುವ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ಪಕ್ಷಾತೀತ, ಜ್ಯಾತ್ಯಾತೀತವಾಗಿ ನಡೆಯುವ ಹೋರಾಟಕ್ಕೆ ಎಲ್ಲರೂ ಬೆಂಬಲ ಘೋಷಿಸಿದ್ದಾರೆ.
ಕಂಬಳ ಹಿಂಸೆಯನ್ನು ಪ್ರಚೋದಿಸುವಂತಹ ಕ್ರೀಡೆ ಅಲ್ಲ. ಕಾಲ ಕಾಲಕ್ಕೆ ಪೌಷ್ಟಿಕ ಆಹಾರವನ್ನುಂಡು, ದೇಹಕ್ಕೆ ಸೂಕ್ತ ಮಸಾಜು ಮಾಡಿಸಿಕೊಂಡು, ಕೆಸರು ಗದ್ದೆಯಲ್ಲಿ ಓಡುವ ಕೋಣಗಳು ಅತ್ಯಂತ ಆರೋಗ್ಯದಾಯಕವಾಗಿರುತ್ತದೆ. ಕೃಷಿಗೆ ಬಳಸುವ ಎತ್ತುಗಳನ್ನಾದರೂ ನಿರ್ವಿರ್ಯಗೊಳಿಸುತ್ತಾರೆ. ಆದರೆ, ಕಂಬಳದ ಕೋಣಗಳು ಪುರುಷತ್ವವನ್ನು ಹೊಂದಿರುತ್ತವೆ ಎಂಬುದನ್ನೂ ನ್ಯಾಯಾಲಯ ಗಮನಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಕಂಬಳ ಸಮಿತಿ ಪರವಾಗಿ ಉಡುಪಿಯ ಶಶಿಕಿರಣ್ ಶೆಟ್ಟಿ ಹಾಗೂ ಕಂಬಳ ಮಾಲೀಕರ ಪರವಾಗಿ ಕುಂದಾಪುರದ ಪವನ್ ಕುಮಾರ್ ಶೆಟ್ಟಿ ಹೈಕೋರ್ಟ್‍ನಲ್ಲಿ ವಾದ ಮಂಡಿಸುತ್ತಿದ್ದಾರೆ. ಜ. 30ರಂದು ಹೈಕೋರ್ಟ್ ಕಂಬಳದ ಪರವಾಗಿ ತೀರ್ಪು ನೀಡುವ ವಿಶ್ವಾಸವಿದೆ. ಆದರೆ, ವ್ಯತಿರಿಕ್ತ ತೀರ್ಪು ಬಂದಲ್ಲಿ ಮತ್ತೊಮ್ಮೆ ಫೆ. 4-5ರಂದು ಮಂಗಳೂರಿನಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ಸಂಸದರು ಹೇಳಿದ್ದಾರೆ.
ಕಂಬಳ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕವಾಗಿ ಶ್ರೀಮಂತವಾಗಿರುವ ಕ್ರೀಡೆ. ಇಲ್ಲಿ ಯಾವುದೇ ಹಿಂಸೆ ನಡೆಯುವುದಿಲ್ಲ ಎಂಬುದನ್ನು ನ್ಯಾಯಾಲಯದ ಮುಂದೆ ನ್ಯಾಯಾಧೀಶರಾದ ಅಬ್ದುಲ್ ನಝೀರ್ ಅವರೇ ಹೇಳಿದ್ದಾರೆ. ಆ ಕಾರಣಕ್ಕೆ ಒಮ್ಮೆ ಸ್ಥಗಿತಗೊಂಡ ಕಂಬಳ ಮತ್ತೆ ಆರಂಭವಾಗಿತ್ತು. ಇದೀಗ ಜಲ್ಲಿಕಟ್ಟಿನಿಂದಾಗಿ ನೇರವಾಗಿ ಕಂಬಳಕ್ಕೆ ಕೆಂಡದ ಮಳೆ ಬಿದ್ದಿದೆ ಎಂದಿದ್ದಾರೆ ನ್ಯಾಯವಾದಿ ಪವನ್ ಕುಮಾರ್ ಶೆಟ್ಟಿ.
ಬಾಲ್ಯದಿಂದಲೂ ಕಂಬಳವನ್ನು ನೋಡಿ ಬೆಳೆದಿದ್ದೇನೆ. ಕಂಬಳದ ಅಭಿಮಾನಿಯಾಗಿ ಕಂಬಳದ ಪರವಾಗಿ ವಾದಿಸುವುದು ತನ್ನ ಬದ್ಧತೆಯಾಗಿದೆ ಎಂದರು.
ಪೇಟಾದಿಂದ ಸಿನಿಮಾ ರಂಗಕ್ಕೂ ತುಂಬಾ ಹಾನಿಯಾಗಿದೆ. ಪ್ರಾಣಿ, ಪಕ್ಷಿ ಬಿಡಿ, ಅಕ್ವೇರಿಯಂನಲ್ಲಿರುವ ಮೀನನ್ನೂ ಚಿತ್ರೀಕರಣದಲ್ಲಿ ಬಳಸುವಂತಿಲ್ಲ. ಈಗ ಕಂಬಳವನ್ನು ನಿಷೇಧಿಸಲು ಹೊರಟಿರುವುದರ ವಿರುದ್ಧ ಇಡೀ ಚಿತ್ರರಂಗ ತಿರುಗಿ ಬಿದ್ದಿದೆ ಎಂದು ತುಳು ಚಿತ್ರರಂಗ ನಿರ್ದೇಶಕ, ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‍ಬೈಲ್ ತಿಳಿಸಿದ್ದಾರೆ.
ಕರಾವಳಿಗರ, ರೈತರ ಪ್ರಮುಖ ಮನರಂಜನೆ, ಭಾವನೆಗಳ ಜೊತೆಗೆ ಮಿಳಿತವಾಗಿರುವ ಕ್ರೀಡೆ ಕಂಬಳ. ಕೋಣವನ್ನು ಅತ್ಯಂತ ಗೌರವಯುತವಾಗಿ ಕಂಬಳ ಕೆರೆಗೆ ತರಲಾಗುತ್ತದೆ. ಇದನ್ನು ನ್ಯಾಯಾಲಯ ಅರ್ಥಮಾಡಿಕೊಳ್ಳುತ್ತದೆ ಎಂದು ನಂಬಿದ್ದೇವೆ. ಸರ್ಕಾರವೇ ಈ ಕ್ರೀಡೆಗೆ ಮಾನ್ಯತೆ ನೀಡಿದೆ ಎಂಬುದು ಒಕ್ಕೋರಲಿನ ವಾದವಾಗಿತ್ತು.
ಬಾಳೆಕೋಡಿ ಮಠದ ಶಶಿಕಾಂತ ಮಣಿ ಸ್ವಾಮೀಜಿ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ, ಪ್ರಧಾನಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ ಕಂಬಿನ ಮನೆ, ಪದಾಧಿಕಾರಿಗಳಾದ ನಾಗರಾಜ್ ಶೆಟ್ಟಿ, ಬಾರ್ಕೂರು ಶಾಂತರಾಮ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ರಂಗಕಲಾವಿದರಾದ ನವೀನ್ ಡಿ.ಪಡೀಲ್, ಸುಂದರ ರೈ ಮಂದಾರ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English