ಮಂಗಳೂರು: ಕೇಂದ್ರ ಸರ್ಕಾರವು ರೂ.500 ಮತ್ತು ರೂ.1000 ನೋಟಿನ ಮಾನ್ಯತೆ ರದ್ದು ಮಾಡಿರುವುದು ಮಾತ್ರವಲ್ಲದೆ ನಗದು ರಹಿತ ವೇತನ ವ್ಯವಸ್ಥೆಗೆ ಆದೇಶ ಹೊರಡಿಸಿದೆ. ಆದರೆ ಕರಾವಳಿ ಜಿಲ್ಲೆಯ ಬೀಡಿ ಕಾರ್ಮಿಕರಿಗೆ ಚಾಲ್ತಿಯಲ್ಲಿರುವಂತೆ ನಗದು ವೇತನ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಬೀಡಿ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾಂಟ್ರಾಕ್ಟರ್ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫಿ ಮಾತನಾಡಿ, ನಗದು ರಹಿತ ವೇತನ ಪದ್ಧತಿ ಕರಾವಳಿ ಜಿಲ್ಲೆಯ ಬೀಡಿ ಕಾರ್ಮಿಕರು ಮತ್ತು ಕಾಂಟ್ರಾಕ್ಟರ್‌ರನ್ನು ಬೀದಿಗೆ ತಳ್ಳಲಿದ್ದು, ಬೀಡಿ ಕೈಗಾರಿಕೆಗೆ ಮಾರಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಬೀಡಿ ಕೈಗಾರಿಕೆಗೆ ನಗದು ರಹಿತ ವೇತನ ಪದ್ಧತಿಯಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದರು.
ಈ ಹಿಂದಿನಂತೆ ನಗದು ಪದ್ಧತಿಯಿಂದ ವೇತನ ವಿತರಿಸಲು ಅವಕಾಶ ನೀಡಬೇಕು. ಒಂದು ವೇಳೆ ಹಠಮಾರಿತನ ಪ್ರಯೋಗಿಸಿ ವೇತನವನ್ನು ಬ್ಯಾಂಕಿಂಗ್ ರಂಗಕ್ಕೆ ಅಳವಡಿಸಬೇಕೆಂದು ಒತ್ತಾಯ ಹೇರಿದರೆ ತೀವ್ರತರದ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ, ಪಿ.ಸಂಜೀವ, ಸೀತಾರಾಮ ಬೇರಿಂಜ, ಹೆಚ್ಎಂಎಸ್ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಜೆ.ಬಾಲಕೃಷ್ಣ ಶೆಟ್ಟಿ, ಯು.ಬಿ. ಲೋಕಯ್ಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English