ಎರಡು ತಿಂಗಳಿಗೊಮ್ಮೆ ಪಡಿತರ ವಿತರಣೆಯ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ: ಯು.ಟಿ.ಖಾದರ್

12:17 PM, Thursday, January 26th, 2017
Share
1 Star2 Stars3 Stars4 Stars5 Stars
(No Ratings Yet)
Loading...

U-T-Khadarಮಂಗಳೂರು: ಎರಡು ತಿಂಗಳಿಗೊಮ್ಮೆ ಪಡಿತರ ವಿತರಣೆಯ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ರಮದ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಎರಡು ತಿಂಗಳು ಅಥವಾ ಮೂರು ತಿಂಗಳ ಪಡಿತರವನ್ನು ಒಮ್ಮೆಲೆ ವಿತರಿಸಿದರೆ ಗ್ರಾಹಕರು ಪದೇ ಪದೆ ಪಡಿತರ ಅಂಗಡಿಗೆ ಬರುವುದು ತಪ್ಪುತ್ತದೆ. ಈ ಬಗ್ಗೆ ಜನತೆಯ ಅಭಿಪ್ರಾಯವನ್ನೂ ಸಂಗ್ರಹಿಸಲಾಗುತ್ತಿದೆ. ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಈ ಯೋಜನೆ ಜಾರಿಗೆ ಒತ್ತು ನೀಡುವುದಾಗಿ ತಿಳಿಸಿದರು.

ಪಡಿತರ ಚೀಟಿ ಗೊಂದಲವನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ತೆಗೆದುಕೊಂಡ ದಿಟ್ಟ ನಿರ್ಧಾರ ಯಶಸ್ಸು ಕಾಣುತ್ತಿದೆ. ಆನ್‌ಲೈನ್‌‌ ಮೂಲಕ ಎಪಿಎಲ್ ಕಾರ್ಡ್‌‌ದಾರರ ದಾಖಲಾತಿ ಆರಂಭಗೊಂಡು ರಾಜ್ಯದಲ್ಲಿ ಇದುವರೆಗೆ 32,148 ಎಪಿಎಲ್ ಕುಟುಂಬಗಳು ಹೊಸ ಪದ್ಧತಿಯ ಮುಖೇನ ಕಾರ್ಡ್‌‌‌ಗಳನ್ನು ಪಡೆದುಕೊಂಡಿವೆ. ದ.ಕ.ಜಿಲ್ಲೆಯೊಂದರಲ್ಲಿಯೇ 1898 ಕುಟುಂಬಗಳು ಎಪಿಎಲ್ ಕಾರ್ಡ್‌‌‌ ಪಡೆದಿವೆ. ಶೀಘ್ರದಲ್ಲಿಯೇ ಬಿಪಿಎಲ್ ಕಾರ್ಡ್‌‌‌ಗಳನ್ನು ಕೂಡ ಆನ್‌ಲೈನ್‌‌ ಮೂಲಕ ಪಡೆಯುವ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದರು.

ಈಗ ವಿತರಿಸುತ್ತಿರುವ ಪಡಿತರದ ಜೊತೆಗೆ 1 ಕೆಜಿ ತೊಗರಿ ಬೇಳೆಯನ್ನು ಕೂಡ ಮುಂದಿನ ತಿಂಗಳಿನಿಂದ ವಿತರಿಸಲಾಗುವುದು. ಅಲ್ಲದೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಸನ್‌ಫ್ಲವರ್‌‌‌ ಆಯಿಲ್ ವಿತರಿಸಲು ನಿರ್ಧರಿಸಿದ್ದು, ಜ. 31ಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು.

ಸೀಮೆಎಣ್ಣೆ ಮುಕ್ತ ಭಾರತ ನಿರ್ಮಾಣಕ್ಕೆ ಉಜ್ವಲ ಯೋಜನೆ ಮೂಲಕ ಕೇಂದ್ರ ಒತ್ತು ನೀಡಿದ್ದರಿಂದ ರಾಜ್ಯಕ್ಕೆ ಬರುವ ಸೀಮೆಎಣ್ಣೆ ಕಡಿಮೆಯಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಬಿಳಿ ಸೀಮೆಎಣ್ಣೆ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಿದ್ದು, ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಮಾರಾಟಗಾರರು ಪರವಾನಿಗೆಯನ್ನು ಪಡೆದುಕೊಳ್ಳಬಹುದು ಎಂದರು.

ಕಂಬಳ ಮತ್ತು ಯಕ್ಷಗಾನ ದ.ಕ. ಜಿಲ್ಲೆಯ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಅದನ್ನು ಉಳಿಸಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಕೂಡ ಕಂಬಳ ಪರವಾಗಿ ಮಾತಾಡಿದ್ದು, ಯಾವುದೇ ತಡೆ ಬಂದರೆ ಸುಗ್ರೀವಾಜ್ಞೆ ಹೊರಡಿಸುವುದಕ್ಕೂ ಮುಂದಾಗಲಿದ್ದಾರೆ. ಜ. 31ರಂದು ಹೊರಬರಲಿರುವ ಕೋರ್ಟ್‌‌ ತೀರ್ಪು ಕಂಬಳ ಪರ ಇರುವ ವಿಶ್ವಾಸವಿದೆ ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English