ಎಸ್. ಎಂ. ಕೃಷ್ಣ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು ದೇಶದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಆಗಲಿದೆ: ಜನಾರ್ದನ ಪೂಜಾರಿ

4:24 PM, Monday, January 30th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Janardhana-Poojaryಮಂಗಳೂರು: ಮಾಜಿ ಸಿಎಂ ಎಸ್. ಎಂ. ಕೃಷ್ಣ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರಿಂದ ಪಕ್ಷಕ್ಕೆ ಭಾರಿ ನಷ್ಟವಾಗಿದ್ದು, ದೇಶದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಆಗಲಿದೆ ಎಂದು ಕಾಂಗ್ರೆಸ್‌‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷ್ಣ ಅವರ ರಾಜೀನಾಮೆಯಿಂದ ಪಕ್ಷಕ್ಕೆ ಮುಂದೆ ದೊಡ್ಡ ಗಂಡಾಂತರ ಬರಲಿದೆ ಎಂದರು. ಕೃಷ್ಣ ಮುತ್ಸದ್ದಿ, ಸಮಾಧಾನಿ, ಒಳ್ಳೆಯ ಮನುಷ್ಯ, ಇಂತಹ ವ್ಯಕ್ತಿಯನ್ನು ಪಕ್ಷ ನಡೆಸಿಕೊಂಡ ರೀತಿ ಸರಿ ಇಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಲ್ಲ, ಇದು ಜನತಾ ದಳ ಸರ್ಕಾರ, ಕುರುಬರ ಸರ್ಕಾರ ಎಂದು ಕೆಲವರು ಕರೆದಿದ್ದಾರೆ. ಇದು ಸರಿಯಲ್ಲ, ಒಂದು ಜಾತಿಯ ಸರ್ಕಾರ ಎಂಬುದು ಸರಿಯಲ್ಲ ಎಂದು ಆರೋಪಿಸಿದರು. ಕೃಷ್ಣ ಅವರು ನಿನ್ನೆ ಭಾವನಾತ್ಮಕವಾಗಿ ಮಾತಾಡಿದ್ದಾರೆ. ತಾಯಿಯನ್ನು ಬಿಟ್ಟು ಹೋಗುವ ವೇದನೆ ಅವರಲ್ಲಿ ಕಾಣುತ್ತಿತ್ತು. ಆದರೆ, ಪಕ್ಷ ಬಿಟ್ಟು ಹೋದದ್ದು ಸರಿಯಲ್ಲ, ನಾನು ಮತ್ತು ನೀವು ಒಟ್ಟಾಗಿ ಹೋರಾಡಬಹುದಿತ್ತು ಎಂದು ಹೇಳಿದರು.

ಇನ್ನು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದ ಪೂಜಾರಿ, ಸಿದ್ದರಾಮಯ್ಯ ದುರಹಂಕಾರ ಮಿತಿಮೀರಿದೆ, ಅವರೊಬ್ಬ ಶನಿ ಅವರು ಹೋಗದೆ ಪಕ್ಷಕ್ಕೆ ಉಳಿಗಾಲ ಇಲ್ಲ, ಒಳ್ಳೆಯ ಕೆಲಸ ಮಾಡಿದಾಗ ಹೊಗಳಿದ್ದೇನೆ, ಪಕ್ಷ ಬಿಟ್ಟು ಹೋಗಬೇಡಿ ಎಂದು ಎಲ್ಲರಿಗೂ ಹೇಳುತ್ತಿದ್ದೇನೆ. ಸಂಸದ ಪ್ರಕಾಶ್ ಹುಕ್ಕೇರಿ, ಜಾಫರ್ ಷರೀಫ್ ಸಹಿತ ಎಲ್ಲರಿಗೆ ಮನವಿ ಮಾಡುತ್ತೇನೆ ಎಂದರು.

ಕೃಷ್ಣ ರಾಜೀನಾಮೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ನೋವಾಗಿದೆ. ನೀವು ಯಾವ ಪಕ್ಷಕ್ಕೂ ಸೇರಬೇಡಿ, ಕಾಂಗ್ರೆಸ್ಸಿನಲ್ಲಿಯೇ ಇದ್ದು ಸೇವೆ ಸಲ್ಲಿಸಿ ಎಂದು ತಿಳಿಸಿದರು.

ನಿಮ್ಮನ್ನು ಮುಗಿಸಲು ವಿರೋಧ ಪಕ್ಷಗಳು ಕಾಯುತ್ತಿವೆ, ಅವರಿಗೆ ನೀವು ದೊಡ್ಡ ಆಸ್ತಿ ಆಗುತ್ತೀರಿ ಆದರೆ, ನಿಮ್ಮ ಮುಂದಿನ ರಾಜಕೀಯ ಜೀವನಕ್ಕೆ ಅವರು ಮುಳ್ಳಾಗುತ್ತಾರೆ. ಬಿಜೆಪಿಯವರು ದಡ್ಡರಲ್ಲ ಅವರಿಗೆ ಅಷ್ಟು ಮನಸ್ಸಿದ್ದರೆ ರಾಷ್ಟ್ರಪತಿ ಹುದ್ದೆ ಕೊಡಲಿ, ಕೃಷ್ಣ ಹಿಂದೆ ಯಾರೂ ಹೋಗಲ್ಲ, ಅವರ ತಲೆಗೆ ಅವರದ್ದೇ ಕೈ, ನನ್ನ ಹಿಂದೆಯೂ ಯಾರೂ ಬರಲ್ಲ, ಅಧಿಕಾರ ಕೊಟ್ಟರೆ ಚಟ್ಟದಿಂದಲೂ ಎದ್ದೇಳುವ ರಾಜಕಾರಣಿಗಳು ಇದ್ದಾರೆ ಎಂದು ಜನಾರ್ದನ ಪೂಜಾರಿ ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English