ಬೀದಿಗೊಂದು ಸರಿಯಾದ ರಸ್ತೆ ಮಾಡಿಕೊಡುವಂತೆ ವೃದ್ಧೆಯ ಮನವಿ

3:46 PM, Saturday, February 4th, 2017
Share
1 Star2 Stars3 Stars4 Stars5 Stars
(No Ratings Yet)
Loading...

Pranaviಮಂಗಳೂರು: ಸೊಂಟದಿಂದ ಕೆಳಗೆ ಶರೀರದಲ್ಲಿ ಬಲ ಕುಂದಿ ನಡೆದಾಡಲೂ ಕಷ್ಟವಾದರೂ ಇಂದಿಗೂ ಯಾರಿಗೂ ಅವಲಂಬಿತರಾದವರಲ್ಲ ಈ ಅಜ್ಜಿ. ಪುತ್ತೂರು ನಗರದ ಬಪ್ಪಳಿಗೆ ಬೈಪಾಸ್ ವೃತ್ತ ಸಮೀಪದ ನಿವಾಸಿಯಾದ 65 ವರ್ಷದ ಬಿ.ಪ್ರಣವಿ ಸರಿಯಾದ ರಸ್ತೆಯೊಂದಿದ್ದರೆ ಎಂತಹ ಕೆಲಸವನ್ನಾದರೂ ಮಾಡಬಲ್ಲೆ. ಎಲ್ಲಿ ಬೇಕಾದರೂ ಹೋಗಬಲ್ಲೆ ಎಂಬ ಧೈರ್ಯವಂತೆ.

ಆದರೆ, ಆ ಬೀದಿಗೆ ಸರಿಯಾದ ರಸ್ತೆಯಿಲ್ಲದಿರುವುದೇ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ. ಅವಿವಾಹಿತರಾಗಿರುವ ಪ್ರಣವಿ ತಂದೆ, ತಾಯಿಯ ಮರಣಾ ನಂತರ ಏಕಾಂಗಿಯಾಗಿದರು. ಕಳೆದ 20 ವರ್ಷಗಳಿಂದ ಮನೆಯೊಳಗೆ ನಾಲ್ಕು ಚಕ್ರದ ಗಾಡಿಯ ಮೂಲಕ ಅತ್ತಿಂದಿತ್ತ ಚಲಿಸುತ್ತಾ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ತಾವಾಗಿಯೇ ಮಾಡಿಕೊಳ್ಳುತ್ತಿರುವ ಸ್ವಾವಲಂಬಿ ಮಹಿಳೆ. ಸರಕಾರದಿಂದ ಬರುವ ಪಿಂಚಣಿ ಇವರ ಜೀವನಕ್ಕೆ ಆಧಾರ.

ಮೊದ ಮೊದಲು ಇವರನ್ನು ಕಾಣಲು ಸಂಬಂಧಿಕರು ಬರುತ್ತಿದ್ದರು. ಆದರೆ, ಈಗ ದಾರಿಯಿಲ್ಲದ ಕಾರಣ ಅಲ್ಲಿಗೆ ಬರುವವರೂ ಕಡಿಮೆಯಾಗಿದ್ದಾರೆ. ಇತ್ತೀಚೆಗೆ ಅವರ ಆರೋಗ್ಯ ಆಗಾಗ ಕೈಕೊಡುತ್ತಿದೆ. ವೈದ್ಯರನ್ನು ಕಾಣಬೇಕೆಂದರೂ ಅವರ ಬೀದಿಗೊಂದು ಸರಿಯಾದ ರಸ್ತೆಯಿಲ್ಲ. ಅದಕ್ಕಾಗಿ ಅದೆಷ್ಟೋ ಮಂದಿಯನ್ನು ಕಾಡಿ ಬೇಡಿಯಾಯಿತು.

ಕನಿಷ್ಟ ಪಕ್ಷ ರಿಕ್ಷಾ ಚಲಿಸುವಷ್ಟು ಅಗಲವಾದರೂ ರಸ್ತೆ ಮಾಡಿಕೊಡಿ ಎಂದು ಎಲ್ಲರಲ್ಲೂ ಕೇಳಿಕೊಂಡಿದ್ದೇನೆ. ಹಲವಾರು ಮಂದಿ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ತಿಳಿಸಿದ್ದರೂ ಈ ತನಕ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಪ್ರಣವಿ ಇಂದಿಗೂ ಯಾರೊಂದಿಗೂ ಆರ್ಥಿಕ ಸಹಾಯ ಯಾಚಿಸಿಲ್ಲ. ಅವರ ಈ ಸಣ್ಣ ಬೇಡಿಕೆಯನ್ನು ಜನಪ್ರತಿನಿಧಿಗಳು ಹಿಂದೆ ಮುಂದೆ ನೋಡದೆ ಈಡೇರಿಸಿ ಅವರ ಸ್ವಾವಲಂಬಿ ಬದುಕಿಗೆ ಅವಕಾಶ ಮಾಡಿಕೊಡಬೇಕಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English