ಎತ್ತಿನಹೊಳೆ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದವರನ್ನು ಬಂಧಿಸಿದ ಪೊಲೀಸರು

9:16 PM, Friday, February 10th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

netravati protest ಮಂಗಳೂರು: ಎತ್ತಿನಹೊಳೆ ಯೋಜನೆ ವಿರೋಧಿಸಿ ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿಯ ನೇತೃತ್ವದಲ್ಲಿ  ಜಿಲ್ಲಾಧಿಕಾರಿ ಕಚೇರಿ ಎದುರು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ವಬೆಳಗ್ಗೆ ಆರಂಭವಾಗಿ ಮಧ್ಯಾಹ್ನ ಮುಗಿಯಿತು.

ಸರ್ವಧರ್ಮದ ಧರ್ಮಗುರುಗಳ ನೇತೃತ್ವದಲ್ಲಿ ಪುರಭವನದ ಮುಂಭಾಗದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ಬಂದು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಮಧ್ಯಾಹ್ನವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಳಿತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

netravati protest ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಯಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಲೇ ನೀರಿನ ಹಾಹಾಕಾರ ಶುರುವಾಗಿದೆ. ನೇತ್ರಾವತಿಯನ್ನು ಉಳಿಸದಿದ್ದರೆ ಜಿಲ್ಲೆಯ ಜನತೆ ಮತ್ತಷ್ಟು ಸಂಕಷ್ಟಕ್ಕೊಳಗಾಗಲಿದ್ದಾರೆ. ಆದ್ದರಿಂದ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸಲೇಬೇಕು. ಸರ್ಕಾರ ಸ್ಪಂದಿಸದೇ ಇದ್ದರೆ ತಾನೂ ಕೂಡ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.

ಪರಮಶಿವಯ್ಯನವರು 2001ರಲ್ಲಿ ತಯಾರಿಸಿದ ವರದಿಗೂ ಈಗಿನ ಪರಿಸ್ಥಿತಿಗೂ ವ್ಯತ್ಯಾಸವಿದೆ. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಲೇ ಇದ್ದು, ಆ ವರದಿ ಈಗ ಪ್ರಸ್ತುತ ಅಲ್ಲ. ಪ್ರಕೃತಿಯನ್ನು ಮೀರಿ ವರ್ತಿಸುವುದು ಸರಿಯಲ್ಲ. ಯೋಜನೆಯ ಸಾಧಕ ಬಾಧಕಗಳ ಕುರಿತಂತೆ ಮತ್ತೊಮ್ಮೆ ವಿಮರ್ಶೆ ನಡೆಯಬೇಕು. ಅಲ್ಲಿಯವರೆಗೆ ಯೋಜನೆ ಸ್ಥಗಿತಗೊಳ್ಳಲೇಬೇಕು. ಸರ್ಕಾರ ಪರಿಸ್ಥಿತಿಯನ್ನು ಅರಿತುಕೊಂಡು ತಕ್ಷಣ ಯೋಜನೆ ನಿಲ್ಲಿಸಲಿ ಎಂದು ಆಗ್ರಹಿಸಿದರು.

ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಎತ್ತಿನಹೊಳೆ ಯೋಜನೆ ಎಂಬುದೇ ಒಂದು ಅವೈಜ್ಞಾನಿಕ ಯೋಜನೆ. ಮುಖ್ಯಮಂತ್ರಿಗಳು ಇದನ್ನು ಕೈಬಿಟ್ಟು ಮಳೆ ಕೊಯ್ಲಿನಂತಹ ಯೋಜನೆಯನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಲಿ. ಹಠಕ್ಕೆ ಬಿದ್ದಂತೆ ಶತಾಯಗತಾಯ ಯೋಜನೆ ಅನುಷ್ಠಾನಕ್ಕೆ ಮುಂದಾಗುತ್ತಿರುವುದು ಸರಿಯಲ್ಲ. ಹೀಗೆ ನಿರ್ಲಕ್ಷ್ಯಿಸಿದರೆ ಹೋರಾಟ ದೆಹಲಿಯ ಮಟ್ಟಕ್ಕೂ ವ್ಯಾಪಿಸಲಿದೆ ಎಂದರು. ಅಲ್ಲದೆ ಮೀನಿನ ಸಂತತಿಯನ್ನು ನಾಶಮಾಡುವ ಎತ್ತಿನಹೊಳೆ ಯೋಜನೆಗೆ ಅವಕಾಶ ನೀಡಬಾರದೆಂದರು.

netravati protest ಜಿಲ್ಲೆಯ ವಿವಿಧ ಸಂಘಟನೆಗಳು ಹೋರಾಟದಲ್ಲಿ ಪಾಲ್ಗೊಂಡಿದ್ದವು. ಸೇರಿದ್ದ ನೂರಾರು ಹೋರಾಟಗಾರರು ‘ಎತ್ತಿನ ಹೊಳೆ ಯೋಜನೆ ನಿಲ್ಲಿಸಿ, ಜೀವನದಿ ನೇತ್ರಾವತಿ ಉಳಿಸಿ’ ಎಂಬ ಬರಹವಿದ್ದ ಪೋಸ್ಟ್ ಕಾರ್ಡ್‌ಗಳನ್ನು ರಾಜ್ಯಪಾಲರಿಗೆ ರವಾನಿಸಿದರು.

ಸಾಂಸದ ನಳಿನ್‌ಕುಮಾರ್ ಕಟೀಲ್, ಫಾದರ್ ನೊರೊನ್ಹಾ, ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿಯ ಸತ್ಯಜಿತ್ ಸುರತ್ಕಲ್, ಎಸ್.ಗಣೇಶ್ ರಾವ್, ಕೃಷ್ಣ ಜೆ ಪಾಲೆಮಾರ್, ಮೋನಪ್ಪ ಭಂಡಾರಿ, ಹರಿಕೃಷ್ಣ ಬಂಟ್ವಾಳ್, ದಿನೇಶ್ ಹೊಳ್ಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಉಪವಾಸ ಸತ್ಯಾಗ್ರಹ ನಿರತರನ್ನು ಪೊಲೀಸರು ಬಲವಂತವಾಗಿ ಕರೆದೊಯ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ 50 ಮಂದಿಯನ್ನು ಬಂಧಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English