ಸೌಜನ್ಯ ಕೊಲೆ ಪ್ರಕರಣ: ಸಿಬಿಐ ವಿಶೇಷ ತನಿಖೆಗೆ ಸೌಜನ್ಯ ಪೋಷಕರ ಸ್ವಾಗತ

3:46 PM, Wednesday, February 15th, 2017
Share
1 Star2 Stars3 Stars4 Stars5 Stars
(No Ratings Yet)
Loading...

Soujanya-caseಮಂಗಳೂರು: ಸೌಜನ್ಯಳ ಅಸಹಜ ಸಾವಿನ ಪ್ರಕರಣವನ್ನು ಮರುತನಿಖೆಗೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿರುವುದನ್ನು ಮೃತಳ ಪೋಷಕರು ಸ್ವಾಗತಿಸಿದ್ದಾರೆ.

ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂವರನ್ನು ತನಿಖೆಗೊಳಪಡಿಸಿದರೆ ಪ್ರಕರಣಕ್ಕೆ ನ್ಯಾಯ ಸಿಗುತ್ತದೆ ಎಂದು ಆಕೆಯ ತಾಯಿ ಕುಸುಮಾವತಿ ಆಶಾವಾದ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯಳ ಪ್ರಕರಣ ಆರಂಭದಿಂದಲೇ ಸರಿಯಾಗಿ ತನಿಖೆಯಾಗಿರಲಿಲ್ಲ. ರಾತ್ರಿಯಾದರೂ ಮನೆಗೆ ಬಾರದ ಮಗಳನ್ನು ಅಂದು ಸಾಕಷ್ಟು ಹುಡುಕಲಾಗಿತ್ತು. ಆದರೆ, ಮರುದಿನ ಹುಡುಕಾಡಿದ ಜಾಗದಲ್ಲೇ ಅಂದರೆ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಕೂಗಳತೆ ದೂರದಲ್ಲೇ ಆಕೆಯ ಶವವನ್ನು ದುಷ್ಕರ್ಮಿಗಳು ಬಿಸಾಕಿ ಹೋಗಿದ್ದರು. ಮಗಳು ನಾಪತ್ತೆಯಾಗಿರುವುದರ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲು ಹೋದರೆ ಧರ್ಮಸ್ಥಳದ ಧಣಿಗಳ ಒಪ್ಪಿಗೆ ಪಡೆದುಬನ್ನಿ ಎಂದು ಠಾಣಾಧಿಕಾರಿ ಸೂಚಿಸಿದ್ದರು ಎಂದು ನೆನಪಿಸಿಕೊಂಡರು.

ಸೌಜನ್ಯ ನಾಪತ್ತೆಯಾದ ದಿನ ಸಂಜೆಯಿಂದ ಸುಮಾರು ಮಧ್ಯರಾತ್ರಿಯವರೆಗೂ ಧರ್ಮಸ್ಥಳದಲ್ಲಿ ಭಾರೀ ಮಳೆ ಇತ್ತು. ಆದರೆ, ಸೌಜನ್ಯಳ ಶವದ ಬಳಿಯಿದ್ದ ಚೀಲ, ಪುಸ್ತಕ, ಆಕೆಯ ಬಟ್ಟೆ, ಛತ್ರಿ ಇವುಗಳಾವು ಒದ್ದೆಯಾಗಿರಲಿಲ್ಲ. ಆಗಿನ ಎಸ್ಪಿ ಅಭಿಷೇಕ್ ಗೋಯಲ್, ಠಾಣಾಧಿಕಾರಿ ಯೋಗೀಶ್ ಕುಮಾರ್ ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ಡಾ. ಆದಂ ಅವರ ಕರ್ತವ್ಯ ಲೋಪದಿಂದ ಪ್ರಕರಣಕ್ಕೆ ನ್ಯಾಯಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.

ತಾವು ನೀಡಿದ ದೂರಿನಲ್ಲಿ ಉದಯ್ ಜೈನ್, ಧೀರಜ್ ಜೈನ್ ಹಾಗೂ ಮಲ್ಲಿಕ್ ಜೈನ್ ಆರೋಪಿಗಳೆಂದು ಹೇಳಿದ್ದೆವು. ಆದರೆ, ಅವರಾರನ್ನೂ ತನಿಖೆ ನಡೆಸದೇ ಆರೋಪಿಗಳು ತೋರಿಸಿದ ಸಂತೋಷ್ ರಾವ್ ಎಂಬ ಮಾನಸಿಕ ಅಸ್ವಸ್ಥನನ್ನು ಅತ್ಯಾಚಾರಿಯೆಂದು ಬಿಂಬಿಸಿದ್ದಾರೆ. ಇನ್ನು ಸೌಜನ್ಯಳ ದೇಹದ ಮೇಲೆ ಕಚ್ಚಿದ ಗುರುತಿದ್ದ ಗಾಯಗಳನ್ನು ಮರಣೋತ್ತರ ಪರೀಕ್ಷಾ ವರದಿಯಲ್ಲೂ ನಮೂದಿಸಿಲ್ಲ. ಇದೇನಾದರೂ ನಮೂದಿಸಿದ್ದರೆ ಅವರ ಹಲ್ಲಿನ ಗುರುತಾದರೂ ತನಿಖೆಯಲ್ಲಿ ಹೊರಬರುತ್ತಿತ್ತು ಎಂದು ಹೇಳಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯ ಅಗತ್ಯ ಬಿದ್ದಲ್ಲಿ ಮೂವರು ಆರೋಪಿಗಳನ್ನು ಮಂಪರು ಪರೀಕ್ಷೆಗೊಳಪಡಿಸಬೇಕು. ಆಗ ಉಳಿದ ಆರೋಪಿಗಳ ಹೆಸರೂ ಸಹ ಹೊರಬೀಳಲಿದೆ. ಸೌಜನ್ಯ ಕೊಲೆಯ ನಂತರ ಈವರೆಗೆ ಸರ್ಕಾರದಿಂದ ಯಾವುದೇ ಸಾಂತ್ವನ ಸಿಕ್ಕಿಲ್ಲ. ಯಾವುದೇ ಸಚಿವರಾಗಲಿ, ಮಹಿಳಾ ಆಯೋಗದವರಾಗಲಿ ಮನೆಗೆ ಭೇಟಿ ನೀಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ವಿಷ್ಣುಮೂರ್ತಿ ಆಪಾದಿಸಿದ್ದಾರೆ.

ಪ್ರಕರಣ ಸರಿಯಾಗಿ ತನಿಖೆಯಾಗಿಲ್ಲವೆಂದು ಇದೀಗ ನ್ಯಾಯಾಲಯವೇ ಹೇಳುತ್ತಿದೆ. ಯಾರ ಒತ್ತಡಕ್ಕೆ ಮಣಿದು ಅಥವಾ ಯಾರಿಂದ ಪ್ರತಿಫಲ ಪಡೆದು ತನಿಖೆಯ ದಾರಿ ತಪ್ಪಿದೆ ಎಂಬುದನ್ನು ಸಿಬಿಐ ಪ್ರಶ್ನಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English