ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ನೇಮಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ಇಂದು ಸಂಜೆ 4 ಗಂಟೆಗೆ ಪಳನಿಸ್ವಾಮಿ ತಮ್ಮ ಸಂಪುಟ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ವಿ.ಕೆ.ಶಶಿಕಲಾ ಅವರ ನಿಷ್ಠಾವಂತ ಇ.ಕೆ.ಪಳನಿಸ್ವಾಮಿಯವರಿಗೆ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ.
ಪಳನಿಸ್ವಾಮಿ ತಮ್ಮ ಬೆಂಬಲಿಗರಾದ ಸಚಿವರಾದ ಜಯಕುಮಾರ್, ಕೆ.ಎ.ಸೆಂಗೊಟ್ಟೈಯನ್, ಎಸ್.ಪಿ.ವ ವೇಲುಮಣಿ, ಟಿ.ಟಿ.ದಿನಕರನ್, ಕೆ.ಪಿ. ಅನ್ಬಜಗನ್ ಮೊದಲಾದವರು ರಾಜ್ಯಪಾಲರ ಭೇಟಿಗೆ ತೆರಳಿದ್ದರು.
ಪಳನಿಸ್ವಾಮಿಯವರು ಕಳೆದ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಬೆಂಬಲಕ್ಕಿರುವ ಶಾಸಕರ ಪಟ್ಟಿಯನ್ನು ನೀಡಿದ್ದರು. ನಿನ್ನೆ ನಡೆದ ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ನಾಯಕನನ್ನಾಗಿ ಪಳನಿಸ್ವಾಮಿಯವರನ್ನು ಆಯ್ಕೆ ಮಾಡಲಾಗಿದ್ದು, ಆ ಪತ್ರವನ್ನು ನಿನ್ನೆ ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು.
ಅದರ ಆಧಾರದ ಮೇಲೆ ಇ.ಕೆ.ಪಳನಿಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದ ರಾಜ್ಯಪಾಲರು ವಿಧಾನಸಭೆಯಲ್ಲಿ 15 ದಿನಗಳೊಳಗೆ ವಿಶ್ವಾಸ ಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ.
ಇದು ಸಾಂಪ್ರದಾಯಿಕ ಸದನ ಪರೀಕ್ಷೆಯಾಗಿದ್ದು, ಇಲ್ಲಿ ಶಾಸಕರು ಪಳನಿಸ್ವಾಮಿಯ ಪರ ಅಥವಾ ವಿರುದ್ಧವಾಗಿ ಮತ ಹಾಕಬೇಕಾಗುತ್ತದೆ. ಇದಕ್ಕೂ ಮುನ್ನ, ಶಾಸಕರು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪಳನಿಸ್ವಾಮಿ ಅಥವಾ ಪನ್ನೀರ್ ಸೆಲ್ವಂ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಬೇಕು ಎಂಬಂತಿತ್ತು.
ಶಶಿಕಲಾ ಬಣಕ್ಕೆ ಬಹುಮತ ಸಾಬೀತುಪಡಿಸಲು ಗವರ್ನರ್ ಅವರು ಅವಕಾಶ ನೀಡಿದ್ದಕ್ಕೆ ಪನ್ನೀರ್ ಸೆಲ್ವಂ ಬಣದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English