ಪಿಎಫ್ಐ ಸಂಘಟನೆ ಮಾಡಿರುವ ಆರೋಪ ಸುಳ್ಳು – ಪೊಲೀಸ್ ಕಮಿಷನರ್

12:16 AM, Wednesday, April 5th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

chandrashekarಮಂಗಳೂರು :  ಅಹ್ಮದ್ ಖುರೇಶಿ ಬಂಧನ ಪ್ರಕರಣದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಪ್ರಕರಣದ ಬಗ್ಗೆ ತಪ್ಪು ಕಲ್ಪನೆಯಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿ ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ  ಪ್ರತಿಭಟನ ನಿರತರ ಮೇಲೆ ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಬೇಕಾಯಿತು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ ಚಂದ್ರಶೇಖರ್ ಹೇಳಿದ್ದಾರೆ.

ಪ್ರಕಾಶ್ ಪೂಜಾರಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಅಹ್ಮದ್ ಖುರೇಶಿ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧಿಸಲ್ಪಟ್ಟ ಖುರೇಶಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಹಾಗೂ ಬಂಧಿತ ಯುವಕನನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಮಂಗಳವಾರ ಬೆಳಿಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ದಿಢೀರನೇ ಪ್ರತಿಭಟನೆ ನಡೆಸಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ಈ ವೇಳೆ ಪ್ರತಿಭಟನಕಾರರನ್ನು ಸ್ಥಳದಿಂದ ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಇದರಿಂದ ಪೊಲೀಸರು ಹಾಗೂ ಹಲವು ಪಿಎಫ್‌ಐ ಕಾರ್ಯಕರ್ತರು ಗಾಯಗೊಂಡಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಟನಕಾರರಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಈ ಪ್ರಕರಣಕ್ಕೆ (ಲಾಟಿಚಾರ್ಜ್) ಸಂಬಂಧಿಸಿದಂತೆ ಮಾಧ್ಯಮ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಎಂ ಚಂದ್ರಶೇಖರ್ ಅವರು ಈ ಮೇಲಿನಂತೆ ಸ್ಪಷ್ಟನೆ ನೀಡಿದರು.

ಇನ್ನು ಬಂಧಿತ ಖೈದಿ ಅಹ್ಮದ್ ಖುರೇಶಿ ಸ್ವತಃ ಅವರೇ ಬಿದ್ದು ಗಾಯಗೊಂಡಿದ್ದಾರೆ. ಅವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆ ಮತ್ತು ಕೋರ್ಟ್ ಆದೇಶದ ಪ್ರತಿಗಳನ್ನು ಬಿಡುಗಡೆ ಮಾಡುವ ಮೂಲಕ ಪಿಎಫ್ಐ ಸಂಘಟನೆ ಮಾಡಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English