ಕ್ರೀಡೆಯ ಮೂಲಕ ತುಳು ಚಿತ್ರರಂಗ ಬೆಳೆಯಲಿ – ಸ್ವರ್ಣತಾರೆ ಗಣೇಶ್

12:19 AM, Thursday, April 6th, 2017
Share
1 Star2 Stars3 Stars4 Stars5 Stars
(No Ratings Yet)
Loading...

ipl ಮಂಗಳೂರು: ಅಲ್ಲಿ ನೆರೆದಿದ್ದ ಎಂಟು ತಂಡಗಳ ಮಾಲಕರು, ಪ್ರಾಯೋಜಕರು, ಸಾವಿರಾರು ಮಂದಿ ಚಿತ್ರರಂಗ, ಕ್ರೀಡಾರಂಗದ ಅಭಿಮಾನಿಗಳ ಹರುಷದ ಹೊನಲು ಮುಗಿಲು ಮುಟ್ಟುತ್ತಿರುವಂತೆ ಕನ್ನಡ ಚಿತ್ರ ರಂಗದ ಸ್ವರ್ಣತಾರೆ ಮುಂಗಾರು ಮಳೆ ಖ್ಯಾತಿಯ ಗಣೇಶ್‌ರವರು ಸಿಪಿಎಲ್ ಪಂದ್ಯಕೂಟದ ಆಕರ್ಷಕ ಟ್ರೋಫಿಯನ್ನು ಅನಾವರಣ ಮಾಡಿದರು. ಕರಾವಳಿಯ ಚಿತ್ರರಂಗದ ಕೋಸ್ಟಲ್‌ವುಡ್ ಕಲಾವಿದರು ಮತ್ತುತಂತ್ರಜ್ಞರ ಸಾಂಸ್ಕೃತಿಕ ಸಂಘಟನೆಯು ಮಂಗಳೂರಿನ ನೆಹರೂ ಮೈದಾನದಲಿ ಎಪ್ರಿಲ್ 11 ರಿಂದ 15ರವರೆಗೆ ಸುರಕ್ಷಾ ಕೋಸ್ಟಲ್‌ವುಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಕೂಟವನ್ನು ನಡೆಸಲಿದೆ.

ಚಿತ್ರರಂಗದಲ್ಲಿ ನಾನಿಟ್ಟ ಮೊದಲ ಹೆಜ್ಜೆಯಲ್ಲಿ ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಕೆಮೆರಾಮೆನ್ ಎಲ್ಲರೂ ತುಳು ಮಣ್ಣಿನ ಜನರೇ ಆಗಿದ್ದು ಆ ಮೂಲಕ ನನಗೆ ದೊರೆತ ಮನ್ನಣೆ ತುಳುನಾಡಿನೊಂದಿಗೆ ಅವಿನಾಭಾವ ಸಂಬಂಧವನ್ನು ರೂಪಿಸಿದೆ. ಹೆಚ್ಚೇನು, ನನಗೆ ಬಾಳ ಸಂಗಾತಿಯನ್ನು ಸಹ ಈ ತುಳು ನಾಡೇ ನೀಡಿ ತುಳು ನಾಡಿಗೆ ಋಣಭಾರನನ್ನಾಗಿ ಮಾಡಿದೆ. ನಾನು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವುದು ಅಪರೂಪವಾಗಿದ್ದರೂ, ತುಳು ಚಿತ್ರರಂಗದ ಮಂದಿಯನ್ನು ನನ್ನ ಮನೆಯ ಮಂದಿ ಎಂದು ಪರಿಗಣಿಸಿ ನಾನಿಂದು ಈ ಸಮಾರಂಭದಲ್ಲಿ ಭಾಗವಹಿಸಿರುವೆನು. ತುಳು ಚಿತ್ರರಂಗದ ಮೇಲೆ ನಾನು ಅಪಾರ ಪ್ರೀತಿಯನ್ನು ಹೊಂದಿದ್ದು, ಆ ರಂಗದ ಬೆಳವಣಿಗೆಗೆ ಇದೀಗ ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯಾಟವು ಒಗ್ಗಟ್ಟಿನ ಬೆಸುಗೆಯ ಮೂಲಕ ಸಹಕಾರಿಯಾಗಲಿದೆ ಎಂದರು. ತಾನು ತುಳು ಮಣ್ಣಿನಿಂದ ಬೆಳೆದು ನಿಂತಿದ್ದು, ಪ್ರತಿಫಲವಾಗಿ ತುಳು ಚಿತ್ರರಂಗಕ್ಕೆ ಏನನ್ನಾದರೂ ಕೊಡಬೇಕೆನಿಸಿದ್ದು ಸದ್ಯದಲ್ಲೇ ತುಳು ಚಿತ್ರವೊಂದನ್ನು ನಿರ್ಮಿಸಲಿರುವೆನು ಮತ್ತು ತುಳು ಹಾಡೊಂದನ್ನು ಹಾಡಲಿರುವೆನು ಎಂದು ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಘೋಷಿಸಿದರು.

ಭಾಗವಹಿಸುವ ಎಂಟು ತಂಡಗಳಲ್ಲಿ ಒಂದಾದ ಜುಗಾರಿ ವಾರಿಯರ‍್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಶ್ರೀ ಮೋಹನ್ ಆಳ್ವರವರು ಪಂದ್ಯಾಕೂಟದ ಪ್ರಥಮ ಹೆಜ್ಜೆಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಅವರು ಮಾತನಾಡುತ್ತಾ ಪಂದ್ಯಕೂಟದ ತುಳು ಭಾಷೆಗೆ ಎರಡು ಸಾವಿರ ವರುಷಗಳ ಇತಿಹಾಸವಿದೆ, ತುಳು ನಾಟಕ ರಂಗಕ್ಕೆ ನೂರಾರು ವರುಷಗಳ ಇತಿಹಾಸವಿದೆ. ತುಳು ಚಿತ್ರರಂಗವು ನಲುವತ್ತು ವರುಷಗಳ ಇತಿಹಾಸದೊಂದಿಗೆ ಬೆಳೆದು ಬಂದು ಇದೀಗ ಇತರೆಲ್ಲಾ ಭಾಷೆಯ ಚಿತ್ರರಂಗಕ್ಕೆ ಸಮಾನಾಂತರವಾಗಿ ನಿಂತಿರುವುದು ಸಂತಸದ ಸಂಗತಿ ಎಂದರು. ಎಲ್ಲ ರಂಗದಲ್ಲೂ ಒಗ್ಗಟ್ಟಿದ್ದರೆ ಪ್ರಗತಿ ಸಾಧ್ಯ, ಅಂತಹ ಒಗ್ಗಟ್ಟು ಈ ಸಿಪಿಎಲ್ ಪಂದ್ಯಕೂಟದ ಮೂಲಕ ತುಳು ಚಿತ್ರರಂಗಕ್ಕೆ ಒದಗಿ ಬರಲಿ ಎಂದು ಹಾರೈಸಿದರು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದಾನಂದ ಶೆಟ್ಟಿಯವರು ಈ ಪಂದ್ಯಕೂಟದ ಮೂಲಕ ತುಳು ಚಿತ್ರರಂಗಕ್ಕೆ ಹೊಸ ಚೈತನ್ಯ ಮೂಡಿ ಬರಲಿ ಎಂದರು.

ಈ ಸಂದರ್ಭದಲ್ಲಿ ಪಂದ್ಯಕೂಟದ ಥೀಮ್ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಪಂದ್ಯಕೂಟವನ್ನು ನಮ್ಮ ದೇಶವನ್ನು ಕಾಯುವ ಸೈನಿಕರಿಗೆ ಅರ್ಪಣೆ ಮಾಡುವುದಾಗಿ ಘೋಷಿಸಲಾಯಿತು. ದೈಹಿಕ ಸಾಮರ್ಥ್ಯವನ್ನು ನೀಡುವ ಝೂಂಬಾ ನೃತ್ಯವನ್ನು ಈ ಸಂದರ್ಭದಲ್ಲಿ ಪರಿಚಯಿಸಲಾಯಿತು.
ಪಂದ್ಯಾಟದಲ್ಲಿ ಭಾಗವಹಿಸುವ ಎಂಟು ತಂಡಗ ದ: ಗ್ಲಿಟ್ಝ್‌ಗ್ಲೇಡಿಯೇಟರ‍್ಸ್, ಕಡಂದಳೆ ಟೈಗರ‍್ಸ್, ರೋಯಲ್ ರೇಂಜರ‍್ಸ್, ಜುಗಾರಿ ವಾರಿಯರ‍್ಸ್, ತುಳುನಾಡು ಪ್ಯಾಂಥರ‍್ಸ್, ಬ್ರ್ಯಾಂಡ್ ವಿಷನ್ ಟಸ್ಕರ‍್ಸ್, ಕೊಡಿಯಾಲ್‌ಬೈಲ್ ಚಾಲೆಂಜರ‍್ಸ್, ಕಲ್ಕುಡೆ ಲಯನ್ಸ್.ಗಳ ಆಟದ ಧಿರಿಸನ್ನು ಬಿಡುಗಡೆ ಮಾಡಲಾಯಿತು. ಎಲ್ಲ ತಂಡದ ಆಟಗಾರರು ಆಟದ ಧಿರಿಸನ್ನು ಧರಿಸಿ ವೇದಿಕೆಗೆ ಆಗಮಿಸಿ ವಿವಿಧ ರೀತಿಯಲ್ಲಿ ಕ್ರಿಕೆಟ್ ಆಟದ ಅಣುಕು ನಟನೆಯನ್ನು ಮಾಡುವ ಮೂಲಕ ತಂಡವನ್ನು ಪರಿಚಯಿಸಿದರು ಮತ್ತು ಜನರನ್ನು ರಂಜಿಸಿದರು.. ಪ್ರತಿಯೊಂದು ತಂಡಗಳು ನೀಡಿದ ವೈವಿದ್ಯಮಯ ಪ್ರಹಸನಗಳು ನೆರೆದ ಅಭಿಮಾನಿಗಳಿಗೆ ಖುಷಿ ನೀಡಿತು. ಎಲ್ಲ ತಂಡಗಳ ರಾಯಭಾರಿಗಳಾದ ಸಿನಿಮಾ ತಾರೆಯರನ್ನು ಪರಿಚಯಿಸಲಾಯಿತು. ಚಿತ್ರನಟ ಅನುರಾಗ್‌ರವರ ತುಳು ಭಾಷೆಯಲ್ಲಿನ ಕಾರ್ಯಕ್ರಮ ನಿರ್ವಹಣೆ ಸಮಾರಂಭಕ್ಕೆ ಮೆರುಗನ್ನು ನೀಡಿತ್ತು.

ನೆಹರೂ ಮೈದಾನದಲ್ಲಿ ಪಂದ್ಯಗಳು:
ಬ್ರಾಂಡ್ ವಿಷನ್ ಕಾರ್ಯಕ್ರಮ ನಿರ್ವಹಣಾ ಸಂಸ್ಥೆಯ ನಿರ್ವಹಣೆಯಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಬೆಳಿಗ್ಗೆ ಗಂಟೆ 9ರಿಂದ ಸಂಜೆಯವರೆಗೆ ಪಂದ್ಯಗಳು ಜರಗಲಿವೆ. ಎಪ್ರಿಲ್ 11 ರಂದು ಅದ್ದೂರಿಯ ಆರಂಭದೊಂದಿಗೆ ಎಪ್ರಿಲ್ 13ರವರೆಗೆ ಲೀಗ್ ಹಂತದ ಪಂದ್ಯಗಳು ಜರಗಲಿವೆ. ಎಪ್ರಿಲ್ 14ರಂದು ಎಲಿಮಿನೇಟರ್ ಹಂತದ ಪಂದ್ಯಗಳು ಮತ್ತು ದಿನಾಂಕ ೧೫ರಂದು ಉಪಾಂತ್ಯ ಮತ್ತು ಅಂತಿಮ ಪಂದ್ಯಗಳು ಜರಗಲಿವೆ. ಲೀಗ್ ಹಂತದಲ್ಲಿ ಪ್ರತಿಯೊಂದು ತಂಡವು ತಲಾ ಹತ್ತು ಓವರುಗಳ ಇನ್ನಿಂಗ್ಸ್‌ಗಳನ್ನೊಳಗೊಂಡ ೩ ಪಂದ್ಯಗಳನ್ನು ಆಡಲಿದ್ದು, ಪ್ರತಿ ಗುಂಪಿನಿಂದ ಮೊದಲ ಮೂರು ಸ್ಥಾನಗಳನ್ನು ಪಡೆದ ತಂಡಗಳು ನಾಕೌಟ್ ಹಂತವನ್ನು ಪ್ರವೇಶಿಸಲಿದ್ದು, ಗುಂಪಿನಲ್ಲಿ ಮೊದಲ ಸ್ಥಾನವನ್ನು ಪಡೆದ ಎರಡು ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಗೈದರೆ, ಎರಡು ಮತ್ತು ಮೂರನೆಯ ಸ್ಥಾನವನ್ನು ಪಡೆದ ತಂಡಗಳು ಕ್ವಾರ್ಟರ್ ಫೈನಲ್ ಪಂದ್ಯಗಳನ್ನಾಡಿ ಸೆಮಿಫೈನಲಿಗೆ ಪ್ರವೇಶವನ್ನು ಪಡೆಯಬೇಕಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English