‘ಜಲಕೃಷಿ ಮತ್ತು ಜೈವಿಕ ಭದ್ರತೆ’ ಕಾರ್ಯಾಗಾರ ತರಬೇತಿ ಉದ್ಘಾಟನೆ.

3:14 PM, Thursday, August 11th, 2011
Share
1 Star2 Stars3 Stars4 Stars5 Stars
(No Ratings Yet)
Loading...

College of Fisheries Mangalore/ ಮಂಗಳೂರು ಮೀನುಗಾರಿಕಾ ಕಾಲೇಜು

ಮಂಗಳೂರು : ಕರ್ನಾಟಕ ವೆಟರ್ನರಿ, ಎನಿಮಲ್‌ ಯಂಡ್ ಫಿಶರೀಸ್‌ ಸೈನ್ಸ್‌ ಯುನಿವರ್ಸಿಟಿ ಬೀದರ್‌ ಮತ್ತು ಮಂಗಳೂರು ಮೀನುಗಾರಿಕಾ ಕಾಲೇಜಿನ ಜಂಟಿ ಆಶ್ರಯದಲ್ಲಿ ಮೀನುಗಾರಿಕಾ ಕಾಲೇಜು ಆವರಣದಲ್ಲಿ ಬುಧವಾರ ಆರಂಭಗೊಂಡ ‘ಜಲಕೃಷಿ ಮತ್ತು ಜೈವಿಕ ಭದ್ರತೆ’ ವಿಷಯದ ಕುರಿತ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರು ವೆಟರ್ನರಿ ಕಾಲೇಜಿನ ಡೀನ್‌ ಡಾ| ಎಸ್‌. ಯತಿರಾಜ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಮೀನುಗಳಿಗೆ ತಗಲುವ ಕಾಯಿಲೆಗಳನ್ನು ಗುರುತಿಸಿ ಪ್ರಕಟಿಸಲು ಸಾಧ್ಯವಾಗುವಂತೆ ವ್ಯವಸ್ಥೆ ರೂಪಿಸಲು ಸರಕಾರದ ಮಟ್ಟದಲ್ಲಿ ಸ್ಪಷ್ಟವಾದ ನೀತಿ ರೂಪಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ‘ಜಲಕೃಷಿ ಮತ್ತು ಜೈವಿಕ ಭದ್ರತೆ’ ವಿಷಯದ ಕುರಿತು ದೇಶದ 15 ಮೀನುಗಾರಿಕಾ ಕಾಲೇಜು ಪ್ರತಿನಿಧಿಗಳು ಭಾಗವಹಿಸುವ ಈ ತರಬೇತಿ ಆ. 24 ತನಕ ನಡೆಯಲಿದೆ. ಔಷಧ ವಿಜ್ಞಾನ ಮತ್ತು ವಿಷಶಾಸ್ತ್ರಗಳನ್ನು ಮೀನುಗಾರಿಕಾ ಕಾಲೇಜಿನ ಪಠ್ಯದಲ್ಲಿ ಸೇರಿಸುವ ಅಗತ್ಯವಿದೆ. ಇದರಿಂದ ಮೀನುಗಾರಿಕಾ ಕಾಲೇಜಿನ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಮೀನುಗಳ ಆರೋಗ್ಯ ರಕ್ಷಣೆ ಹಾಗೂ ಅಪಾಯಕಾರಿ ಔಷಧಗಳ ಬಳಕೆ ಕುರಿತು ಹೆಚ್ಚಿನ ತಿಳುವಳಿಕೆ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆ ಅನುಷ್ಠಾನ ದಿಕ್ಕಿನಲ್ಲಿ ಈಗಾಗಲೇ ಪ್ರಯತ್ನ ನಡೆಯುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸ್ಕಾಟ್‌ಲಂಡ್‌ನ‌ ಜಲಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯದ ಡಾ| ಜೇಮ್ಸ್‌ ಎಫ್. ಟರ್ನ್ಬಲ್‌ ಅವರು ಮಾತನಾಡಿ, ಯುರೋಪಿಯನ್‌ ದೇಶಗಳು ನಿಷೇಧಿತ ಔಷಧಗಳನ್ನು ಬಳಸದ ಮೀನುಗಳನ್ನು ಪಡೆಯಲು ಕಠಿನ ನಿಯಮಗಳನ್ನು ರೂಪಿಸಿವೆ. ಭಾರತ ಸೇರಿದಂತೆ ಮೀನುಗಳನ್ನು ರಫ್ತು ಮಾಡುವ ಎಲ್ಲಾ ದೇಶಗಳು ಈ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದರು.

ಜಲಕೃಷಿಯು ಆಹಾರ ಉತ್ಪಾದನೆ ಉದ್ಯಮದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಈ ವಿಭಾಗದಲ್ಲಿ ದೇಶದ ಪ್ರಗತಿಯು ವಾರ್ಷಿಕ ಶೇ. 6ರಿಂದ 8 ಪ್ರಮಾಣವಿದೆ. ಇಂದು ಜಗತ್ತಿನಲ್ಲಿ ಮೀನಿನ ಆಹಾರ ಸೇವಿಸುವ ಶೇ. 50 ಜನರು ಜಲಕೃಷಿಯ ಉತ್ಪನ್ನಗಳನ್ನೇ ಅವಲಂಬಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮೀನಿನ ಕಾಯಿಲೆಗಳನ್ನು ನಿಯಂತ್ರಿಸಲು ಸುರಕ್ಷಿತ ಔಷಧಗಳ ಬಳಕೆ ಸವಾಲಿನ ವಿಷಯವಾಗಿದೆ. ಮೀನಿನ ಕಾಯಿಲೆಗಳಿಂದ ವಾರ್ಷಿಕ ಸುಮಾರು 600 ಕೋಟಿ ರೂ. ನಷ್ಟ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರದ ಕೃಷಿ ಸಚಿವಾಲಯವು ಮೀನುಗಾರಿಕಾ ಶಿಕ್ಷಣದಲ್ಲಿ ಔಷಧ ವಿಜ್ಞಾನ ಮತ್ತು ವಿಷ ಶಾಸ್ತ್ರಗಳನ್ನು ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದು ಪ್ರಸ್ತಾವನೆಗೈದ ಮೀನುಗಾರಿಕಾ ಕಾಲೇಜಿನ ಡೀನ್‌ ಡಾ| ಕೆ.ಎಂ. ಶಂಕರ್‌ ಅವರು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English