ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಮಂಗಳವಾರ ನಡೆಯಿತು.
ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಶಕ್ತಿಯನ್ನು ನಾವು ಒಳ್ಳೆ ಉದ್ದೇಶಕ್ಕೆ ಬಳಸಬೇಕೆಂದು ಮಹಾವೀರರ ಆಶಯವಾಗಿತ್ತು. ನಮ್ಮಲ್ಲಿರುವ ಮದ ಮೋಹ ಮತ್ಸರ. ಅವೆಲ್ಲವನ್ನು ತೊರೆದು ಶುದ್ಧಾತ್ಮನಾಗಬೇಕು ಎಂಬುವುದಕ್ಕೆ ಸಪ್ತ ತತ್ವಗಳನ್ನು ಬೋಧಿಸಿದ್ದಾರೆ.
ನಾವು ಎಲ್ಲ ಜೀವಿಗಳಲ್ಲೂ ದಯೆ ಅನುಕಂಪಗಳನ್ನು ಬೆಳೆಸಿಕೊಳ್ಳಬೇಕು. ಶುದ್ಧ ಮನಸ್ಸನ್ನು ಹೊಂದಿರಬೇಕೆಂಬ ಮಹಾವೀರರ ಸಂದೇಶವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ವಾಗ್ಮಿ ಸುಕುಮಾರ್ ಬಲ್ಲಾಳ್ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಮಹಾನ್ ದಾರ್ಶನಿಕರ ಜೀವನ ಸಂದೆಶಗಳು, ಬೋಧನೆಗಳು ಅವರವರ ಸಮುದಾಯದವರಿಗೆ ಸೀಮಿತಗೊಳ್ಳುತ್ತಿವೆ. ಇದು ಸರಿಯಲ್ಲ. ಎಲ್ಲ ಮಹಾನ್ ವ್ಯಕ್ತಿಗಳ ಜೀವನಸಂದೇಶಗಳು ಎಲ್ಲ ಜಾತಿ, ಧರ್ಮ, ಸಮುದಾಯಕ್ಕೂ ಅನ್ವಯವಾಗುತ್ತದೆ. ಮಾಂಸಹಾರ ಮಾತ್ರ ಹಿಂಸೆ ಎನ್ನುವ ಭಾವನೆಯಿದೆ. ಇದು ಸರಿಯಲ್ಲ ಮನಸ್ಸಿಗೆ ನೋವುದು ಕೂಡ ಹಿಂಸೆಯಾಗಿದೆ ಎಂಬುವುದು ಮಹಾವೀರರ ಬೋಧನೆಯಾಗಿದೆ. ಎಲ್ಲ ಆತ್ಮಗಳು ಶುದ್ಧಾತ್ಮ ಆಗಬೇಕು, ಬದುಕು ಬದುಕಲು ಬಿಡು ಎಂಬ ಮಹಾವೀರರ ಸಂದೇಶ ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವಾಗಿದೆ. ನೀವು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಸಾಧನೆ ಮೂಲಕ ಗುರುತಿಸಿಕೊಳ್ಳಬೇಕು. ನಮ್ಮ ನಾವು ಅರಿಯದಿದ್ದರೆ ಧರ್ಮವನ್ನು ಅರಿಯಲು ಸಾಧ್ಯವಿಲ್ಲ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಭಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಚೌಟರ ಅರಮನೆಗೆ ಕುಲದೀಪ್ ಎಂ. ಮುಖ್ಯ ಅತಿಥಿಯಾಗಿದ್ದರು.
ರಾಜಶ್ರೀ ಮತ್ತು ಪದ್ಮಶ್ರೀ ಅವರಿಂದ ಅಷ್ಟವಿಧಾರ್ಚನೆ, ಆಳ್ವಾಸ್ ವಿದ್ಯಾರ್ಥಿಗಳು ಜಿನ ಆರಾಧನಾ ಗೀತೆಗಳನ್ನು ಹಾಡಿದರು.
Click this button or press Ctrl+G to toggle between Kannada and English