ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದ ನಿಜಾಂಶ ತನಿಖೆಯಾದ ಮೇಲೆ ಹೊರಬರಲಿದೆ : ಜಿ. ಪರಮೇಶ್ವರ್

12:08 AM, Wednesday, May 3rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

G parameshwar
ಮಂಗಳೂರು : ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ  ಉತ್ತಮವಾಗಿದೆ, ಯಾವುದೇ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೇ ಆಗಲಿ ರಕ್ಷಿಸಲಾಗದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ  ಅವರು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ  ಎಂದರು.

ಪಿಎಫ್ಐ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ನಡೆದ ಮುತ್ತಿಗೆ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕಾನೂನಿಗೆ ವಿರುದ್ಧವಾಗಿ ನಡೆದರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಗೃಹ ಸಚಿವರು ನುಡಿದರು.

ಜಲೀಲ್ ಕರೋಪಾಡಿ ಅವರ ಹತ್ಯೆ ಪ್ರಕರಣದಲ್ಲಿ ಭೂಗತ ಜಗತ್ತಿನ ನಂಟು ಹಾಗೂ ಸಂಘ ಪರಿವಾರದ ಕೈವಾಡದ ಕುರಿತಂತೆ ಸ್ಥಳೀಯ ಸಚಿವರ ಹೇಳಿಕೆಯ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವೆಲ್ಲಾ ಅಂಶಗಳು ತನಿಖೆಯಾದ ಮೇಲೆ ಹೊರಬರಲಿದೆ. ಪ್ರಸ್ತುತ ಊಹಾಪೋಹಗಳ ಬಗ್ಗೆ ಅಧಿಕೃತವಾಗಿ ಹೇಳಲಾಗದು ಎಂದರು.

ಮಾಜಿ ಮೇಯರ್‌ ಸಂಘಟನೆಯೊಂದರ ಜತೆ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಪಕ್ಷ ಕ್ರಮ ಕೈಗೊಳ್ಳುವುದೇ ಎಂಬ ಪ್ರಶ್ನೆಗೆ, ಈ ಬಗ್ಗೆ ಜಿಲ್ಲಾಧ್ಯಕ್ಷರು ಗಮನ ಹರಿಸಲಿದ್ದಾರೆ. ಪಕ್ಷಕ್ಕೆ ತನ್ನದೇ ಆದ ಬೈಲಾ ಇದೆ ಎಂದು ಅವರು ಹೇಳಿದರು.

ಕೆಲವೊಂದು ಪ್ರಕರಣಗಳ ತನಿಖೆಗೆ ಸಮಯ ಹಿಡಿಯುತ್ತದೆ. ಸುಮಾರು 40ರಷ್ಟು ಇನ್‌ಸ್ಪೆಕ್ಟರ್‌ಗಳು, ಡಿವೈಎಸ್ಪಿಗಳ ನೇಮಕದ ಹೊರತಾಗಿಯೂ ಹಿರಿಯ ಸಾಹಿತಿ ಕಲ್ಬುರ್ಗಿಯವರ ಹತ್ಯೆ ಪ್ರಕರಣವನ್ನು ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಅವರು ಕಾರ್ತಿಕ್‌ರಾಜ್ ಕೊಲೆ ಪ್ರಕರಣ ಪತ್ತೆ ವಿಳಂಬದ ಕುರಿತಂತೆ ಪ್ರತಿಕ್ರಿಯಿಸಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ಕೆಲವೊಂದು ಸುಧಾರಣಾ ಕ್ರಮ ತೆಗೆದುಕೊಳ್ಳಲಾಗಿದ್ದು ಈಗಾಗಲೇ ಜೈಲಿನ ಸೂಪರಿಂಡೆಂಟ್ ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಹೊಸ ಅಧಿಕಾರಿ ನೇಮಕಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಮುಡಿಪುವಿನಲ್ಲಿ ನಿರ್ಮಿಸಲುದ್ದೇಶಿಸಿರುವ ನೂತನ ಜೈಲು ಕಟ್ಟಡಕ್ಕೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಬಂಧಿಖಾನೆ ಅಧಿಕಾರಿಗಳ ಜತೆ ಮಾತನಾಡಿ ಮುಂದಿನ ಕ್ರಮಕ್ಕೆ ಸೂಚಿಸಲಾಗುವುದು ಎಂದು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English