ಮಂಗಳೂರು : ಚಿತ್ರರಂಗಕ್ಕೆ ಹಲವಾರು ಖ್ಯಾತನಾಮರನ್ನು ಕೊಟ್ಟಿರುವ ತುಳುನಾಡಿನ ಓರ್ವ ಪ್ರಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಈ ಬಾರಿ ಅತ್ಯಂತ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ ಲಭಿಸುವ ಮೂಲಕ ಅವರ ಪ್ರತಿಭೆಗೆ ಹೊಸದೊಂದು ಮನ್ನಣೆ ಸಿಕ್ಕಂತಾಗಿದೆ.
ಈಗಾಗಲೇ ಮೂರು ಬಾರಿ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿರುವ ಅವರು ರಾಜ್ಯ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಈಗ ಕೆಂಪೇಗೌಡ ಪ್ರಶಸ್ತಿ ಸಂದಿರುವುದು ಆ ಸಾಲಿಗೆ ಮತ್ತೊಂದು ಸೇರ್ಪಡೆ.
ಅತ್ಯಂತ ಯಶಸ್ವಿ ಸಂಗೀತ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಗುರುಕಿರಣ್ ಅವರು ಹಲವಾರು ಟೀವಿ ರಿಯಾಲಿಟಿ ಶೋಗಳಲ್ಲೂ ತೀರ್ಪುಗಾರರಾಗಿದ್ದಾರೆ. ಒಂದು ಹಂತದಲ್ಲಿ ನಟನಾ ಕ್ಷೇತ್ರದಲ್ಲೂ ಕೈಯಾಡಿಸಿರುವ ಇವರು ತುಳುನಾಡಿನಿಂದಲೇ ಬೆಳೆದು ಬಂದಿರುವ ಪ್ರತಿಭೆ. ಇವರು ಈಗ ಪ್ರತ್ಯೇಕ ಸಂಗೀತ ತಂಡವೊಂದನ್ನು ಹೊಂದಿದ್ದು, ಅದಕ್ಕೆ ರಾಜ್ಯವ್ಯಾಪಿಯಾಗಿ ಭಾರೀ ಬೇಡಿಕೆಯಿದೆ. ಈ ಟ್ರೂಪ್‌ಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲದಷ್ಟು ಅವಕಾಶಗಳು ಬರುತ್ತಿರುವುದು ಇವರಿಗಿರುವ ಬೇಡಿಕೆ, ಅಭಿಮಾನಿ ವರ್ಗಕ್ಕೆ ಒಂದು ಉತ್ತಮ ಸಾಕ್ಷಿ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಸಹಿತ ಹಲವಾರು ಭಾಷೆಗಳ ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಿರುವ ಇವರು ಇನ್ನೂ ಕುಡ್ಲದ ಹುಡುಗನಾಗಿ ಸರಳತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಮಂಗಳೂರಿಗೆ ಬಂದಾಗ ತನ್ನ ಹಳೆಯ ಗೆಳೆಯರನ್ನು ಭೇಟಿಯಾಗದೆ ಹೋಗುವುದೇ ಇಲ್ಲ. ಸಮಯ ಸಿಕ್ಕಾಗಲೆಲ್ಲ ಅವರೊಂದಿಗೆ ದೂರವಾಣಿ ಸಂಪರ್ಕದಲ್ಲೂ ಇರುವ ಇವರು ತುಳುನಾಡಿನ ಬಗ್ಗೆ ಅಪಾರ ಒಲವು, ಅಭಿಮಾನ, ಪ್ರೀತಿ ಹೊಂದಿರುವ ಕಲಾವಿದರು.
ಕೆಂಪೇಗೌಡ ಪ್ರಶಸ್ತಿಯಿಂದ ಅಲಂಕೃತವಾಗಿರುವ ಅವರಿಗೆ ನಾವೆಲ್ಲರೂ ಶುಭ ಕೋರುವುದರೊಂದಿಗೆ ಸಿನಿಮಾ ರಂಗದಲ್ಲಿ ಇನ್ನಷ್ಟು ಸಾಧನೆ ಮಾಡಲಿ. ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಲಭಿಸಲಿ ಎಂದು ಹಾರೈಸೋಣ. ತುಳುವರ ಪ್ರೀತಿ ಇವರಿಗೆ ಇನ್ನಷ್ಟು ಹೆಚ್ಚಲಿ.
Click this button or press Ctrl+G to toggle between Kannada and English