ನೂತನ ಪೊಲೀಸ್ ಆಯುಕ್ತರ ನೇಮಕಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರ ತೀವ್ರ ಅಸಮಾಧಾನ

6:33 PM, Friday, May 26th, 2017
Share
1 Star2 Stars3 Stars4 Stars5 Stars
(No Ratings Yet)
Loading...

satheesh Kumar ipsಮಂಗಳೂರು :  ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಎನ್ . ಸತೀಶ್ ಕುಮಾರ್ ಅವರ ನೇಮಕಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರ ತೀವ್ರ ಅಸಮಾಧಾನ  ಪಡಿಸಿದ್ದು  ಸತೀಶ್ ಕುಮಾರ್ ಅಧಿಕಾರ ಸ್ವೀಕರಿಸುವುದು ತಡವಾಗುವ ಅಥವಾ ರದ್ದಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸತೀಶ್ ಕುಮಾರ್ ಅವರ ನೇಮಕದ ಕುರಿತು ಮಂಗಳೂರಿನ ಕಾಂಗ್ರೆಸ್ ಶಾಸಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಇದು ಅವರ ಪಾಲಿಗೆ ಅಚ್ಚರಿಯ ಆದೇಶ ಎಂದು ಹೇಳಲಾಗಿದೆ.  ಆಹಾರ ಸಚಿವ ಯು. ಟಿ. ಖಾದರ್ ಹಾಗೂ ಕಾಂಗ್ರೆಸ್ ಶಾಸಕರು ಈ ಬಗ್ಗೆ ಮುಖ್ಯಮಂತ್ರಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸತೀಶ್ ಕುಮಾರ್ ಸೇವೆ ಸಲ್ಲಿಸಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯ ಬಗ್ಗೆ ಜನರಲ್ಲಿ ದೂರುಗಳಿದ್ದವು. ದೇಶ, ವಿದೇಶಗಳಲ್ಲಿ ಮಂಗಳೂರಿಗೆ ಕೆಟ್ಟ ಹೆಸರು ತಂದ ಚರ್ಚ್ ದಾಳಿ ಪ್ರಕರಣ ಹಾಗೂ ಅದರ ಬೆನ್ನಿಗೇ ಚರ್ಚ್ ನಲ್ಲಿ ಪ್ರಾರ್ಥನಾನಿರತರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣಗಳು ಸತೀಶ್ ಕುಮಾರ್ ಅವಧಿಯಲ್ಲೇ ನಡೆದಿದ್ದವು. ಆದ್ದರಿಂದ ಅವರ ಕಾರ್ಯ ವೈಖರಿಯ ಕುರಿತು ತೀವ್ರ ಅಸಮಾಧಾನ ಆ ಸಂದರ್ಭದಲ್ಲಿ ವ್ಯಕ್ತವಾಗಿತ್ತು. ಈಗ ಚುನಾವಣಾ ವರ್ಷದಲ್ಲಿ ಮತ್ತೆ ಮಂಗಳೂರು ಆಯುಕ್ತರ ಮಹತ್ವದ ಹುದ್ದೆಗೆ ಅವರನ್ನು ನೇಮಿಸಿರುವುದರಿಂದ ನಗರದಲ್ಲಿ ಹಾಗೂ ಆ ಮೂಲಕ ಜಿಲ್ಲೆಯಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ಕಾಂಗ್ರೆಸ್ ಸಚಿವರು, ಶಾಸಕರ ದೂರು.

ವಿಶೇಷವಾಗಿ ಚರ್ಚ್ ದಾಳಿ ಬಳಿಕ ಉಳ್ಳಾಲ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ದೌರ್ಜನ್ಯಗಳಲ್ಲಿ ಸತೀಶ್ ಕುಮಾರ್ ಅವರ ಪಾತ್ರದ ಕುರಿತು ಸಚಿವ ಯು.ಟಿ. ಖಾದರ್ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ್ದ ಚಂದ್ರಶೇಖರ್ ಅವರು ದಕ್ಷ ಅಧಿಕಾರಿಯಾಗಿದ್ದರು ಎಂಬ ಜನಾಭಿಪ್ರಾಯವಿದೆ. ಅಂತಹ ಅಧಿಕಾರಿ ನಿರ್ಗಮಿಸುವಾಗ, ಅದೂ ಚುನಾವಣಾ ವರ್ಷದಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಜನರ ಅಸಮಾಧಾನಕ್ಕೆ ಪಾತ್ರರಾದ ಅಧಿಕಾರಿಯನ್ನು ಆಯುಕ್ತರಾಗಿ ನೇಮಿಸುವುದು ಸರಿಯಲ್ಲ ಎಂಬ ವಾದವನ್ನು ಖಾದರ್ ಸಹಿತ ಕಾಂಗ್ರೆಸ್ ಶಾಸಕರು ಸರಕಾರದ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ವಾದವನ್ನು ಮುಖ್ಯಮಂತ್ರಿ, ಗೃಹ ಸಚಿವರು ಒಪ್ಪುತ್ತಾರೆಯೇ, ಇಲ್ಲವೇ ಎಂದು ಕಾದು ನೋಡಬೇಕಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English