ಮಂಗಳೂರು : ಪೋಕ್ಸೋ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಿ ಮಕ್ಕಳ ದೌರ್ಜನ್ಯ ಎಸಗುವ ಆರೋಪಿಗಳಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಜುಲೈನಲ್ಲಿ ಎಸ್‌ಒಪಿ ಜಾರಿಗೆ ಬರಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ ತಿಳಿಸಿದರು.
ಪತ್ರಿಕಾಭವನದಲ್ಲಿ ಸೋಮವಾರ ಪತ್ರಕರ್ತರ ಜತೆ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೋಕ್ಸೋ ಕಾಯ್ದೆಗೆ ಸಂಬಂಧಿಸಿ ಪ್ರಕರಣ ನಡೆದ ಎಷ್ಟೋ ಸಮಯದ ಬಳಿಕ ವಿಚಾರಣೆ ನಡೆಯುತ್ತದೆ. ಇದರಿಂದ ದೌರ್ಜನ್ಯದ ಘಟನೆಯನ್ನು ಸಮರ್ಪಕವಾಗಿ ವಿವರಿಸುವುದು ಕಷ್ಟ. ಇದರಿಂದ ಪ್ರಕರಣ ಬೇಗ ಬಿದ್ದು ಹೋಗುತ್ತಿದೆ. ಹೀಗಾಗಿ ಪೊಲೀಸರು, ಸರಕಾರಿ ಅಭಿಯೋಜಕ, ಬೆರಳಚ್ಚು ತಜ್ಞರನ್ನು ಒಳಗೊಂಡು ಎಸ್‌ಒಪಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು
ಶಾಲೆಗಳಿಂದ ದೂರವಿರುವ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಯ ಕಡೆಗೆ ಕರೆತರಲು ಶಾಲೆ ಕಡೆ ನನ್ನ ನಡೆ ಕಾರ್ಯಕ್ರಮ ನಡೆಸಲಾಗುತ್ತಿದ್ದು, ರಾಜ್ಯದಲ್ಲಿ ಕಳೆದ ವರ್ಷ 1.71 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಸರಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿ ಶಾಲೆಗಳಿಗೆ ಒಬ್ಬರು ಇಂಗ್ಲೀಷ್ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಂಗೀತ ಶಿಕ್ಷಕರನ್ನು ಒದಗಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅದನ್ನು ಬಲಪಡಿಸುವ ನಿಟ್ಟಿನಲ್ಲಿ ಆಯೋಗ ಕಾರ್ಯಪ್ರವೃತ್ತವಾಗಿದೆ. ಅದಕ್ಕಾಗಿ ಈಗಾಗಲೇ ತಾನು 11 ಜಿಲ್ಲೆಗಳಿಗೆ ಭೇಟಿ ನೀಡಿ ಸಭೆಗಳನ್ನು ನಡೆಸಲಾಗಿದೆ ಎಂದವರು ಹೇಳಿದರು.
ಬಾಲ್ಯ ವಿವಾಹಕ್ಕೆ ಸಂಬಂಧಪಟ್ಟಂತೆ ಗುಲ್ಬರ್ಗಾದಲ್ಲಿ 60, ಬೆಳಗಾಂನಲ್ಲಿ 70 ಪ್ರಕರಣಗಳು ಕಂಡು ಬಂದಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ಜನವರಿ 21ರಿಂದ ಜೂನ್ 21ರ ವರೆಗೆ ಬಾಲ ವಿವಾಹ ನಿಷೇಧ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಮಕ್ಕಳು ತಂಬಾಕು ಸೇವನೆಯಿಂದ ಆರಂಭಿಸಿ ಡ್ರಗ್ಸ್ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಆದರ ವಿರುದ್ಧವೂ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಆರ್‌ಟಿಇ ಮೂಲಕ ದಾಖಲಾದ ಮಕ್ಕಳಿಗೆ ನೀಡುವ ಕಿರುಕುಳದ ಕುರಿತು ಕೂಡ ಹಲವು ದೂರುಗಳು ಬಂದಿವೆ ಎಂದು ಡಾ. ಕೃಪಾ ಆಳ್ವ ತಿಳಿಸಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಮಕ್ಕಳ ರಕ್ಷಣಾ ಅಧಿಕಾರಿ ಉಸ್ಮಾನ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್‌ಕ್ಲಬ್ ಅಧ್ಯಕ್ಷ ಡಾ. ರೊನಾಲ್ಡ್ ಫೆರ್ನಾಂಡೀಸ್ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ವಂದಿಸಿದರು
Click this button or press Ctrl+G to toggle between Kannada and English