ಮಂಗಳೂರು : ಕಾಸರಗೋಡಿನಲ್ಲಿರುವ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಮಲಯಾಳಿ ಭಾಷಿಗರ ದಬ್ಬಾಳಿಕೆಯನ್ನು ಖಂಡಿಸಿ ಜೂ.8 ರಂದು ಉಡುಪಿಯಿಂದ ಕಾಸರಗೋಡಿನವರೆಗೆ `ಕಾಸರಗೋಡು ಚಲೋ’ ಮಾಡಲಾಗುವುದು ಹಾಗೂ ಸಂಜೆಯವರೆಗೆ ಗಡಿ ಬಂದ್ ಮಾಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಕಾಸರಗೋಡು ಕರ್ನಾಟಕದ ಭಾಗವಾಗಿದ್ದರೂ, ಸರ್ಕಾರದ ಬೇಜವಾಬ್ದಾರಿಯಿಂದ ಅದು ಕೇರಳ ರಾಜ್ಯಕ್ಕೆ ಸೇರಿಹೋಯಿತು. ಆದರೆ, ಗಡಿನಾಡಿನ ಸ್ವಾಭಿಮಾನಿ ಕನ್ನಡಿಗರ ಹೋರಾಟದ ಫಲವಾಗಿ ಅಲ್ಲಿ ಇಂದಿಗೂ ಕನ್ನಡ ಶಾಲೆಗಳು ಉಳಿದಿವೆ. ಇದೀಗ ಮಲಯಾಳಿ ಭಾಷಿಗರಿಂದ ಕನ್ನಡ ಶಾಲೆಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಡಿನಾಡ ಕನ್ನಡಿಗರ ಪರ ಹೋರಾಟದಲ್ಲಿ ಪ್ರಮುಖರಾದ ಭಾಸ್ಕರ್ ಕೆ. ಮಾತನಾಡಿ, ಹಿಂದೆ ಕಾಸರಗೋಡಿನ ನೀಲೇಶ್ವರದವರೆಗೆ ಕನ್ನಡ ಮಾಧ್ಯಮ ಶಾಲೆಗಳಿದ್ದವು. ಆದರೆ, ಮಲಯಾಳಿ ಭಾಷಿಕರ ಕಿರುಕುಳದಿಂದ ಇದೀಗ ಕಾಸರಗೋಡು-ಮಂಜೇಶ್ವರದ 20 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಜೂನ್ 12ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಪ್ರವೀಣ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಪ್ರಮುಖರು ಇದರಲ್ಲಿ ಭಾಗಿಯಾಗಲಿದ್ದಾರೆ.
Click this button or press Ctrl+G to toggle between Kannada and English