ಮಂಗಳೂರು : ಎಂಆರ್‌ಪಿಎಲ್ ವಿಸ್ತರಣೆಗಾಗಿ ರೈತರ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡುತ್ತಿದೆ, ಕೆಐಎಡಿಬಿಯು ಹಳೇ ಕಾನೂನನ್ನು ಬಳಕೆ ಮಾಡಿಕೊಂಡು ಭೂಸ್ವಾಧೀನ ಮಾಡಬಾರದು ಎಂದು ಮಂಗಳೂರು ವಿಶೇಷ ಆರ್ಥಿಕ ವಲಯ ವಿರೋಧಿ ಹೋರಾಟಗಾರ್ತಿ ವಿದ್ಯಾ ದಿನಕರ್ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.
ವಿದ್ಯಾ ದಿನಕರ್ ನೇತೃತ್ವದ ನಿಯೋಗ, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ನೀಡಿದ ದೂರಿನಲ್ಲಿ ಯುಪಿಎ ಸರಕಾರ 2013 ರಲ್ಲಿ ಹೊಸ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ರಾಜ್ಯ ಸರಕಾರದ ಕೆಐಎಡಿಬಿ ಹಳೇ ಕಾನೂನಿನಂತೆಯೇ ಭೂಸ್ವಾಧೀನಕ್ಕೆ ನೋಟಿಸ್ ನೀಡಿದೆ, ಹಳೇ ಕಾನೂನನ್ನು ಬಳಕೆ ಮಾಡಿಕೊಂಡು ಭೂಸ್ವಾಧೀನ ಮಾಡಬಾರದು ಎಂದು ಈಗಾಗಲೇ ಹೈಕೋರ್ಟ್ ಆದೇಶ ನೀಡಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. .
ಎಂಆರ್‌ಪಿಎಲ್ ಆವರಣಕ್ಕೆ ಹೊಂದಿಕೊಂಡಿರುವ ತೋಕೂರು ಗ್ರಾಮದಲ್ಲಿ ಜೆಸ್ಕೋಗಾಗಿ ವಶಪಡಿಸಿಕೊಂಡಿರುವ 900 ಎಕರೆ ಹಲವು ವರ್ಷಗಳಿಂದ ಖಾಲಿ ಬಿದ್ದಿದೆ. ಜೆಸ್ಕೋ ಅಥವಾ ಯಾವುದೇ ಕೈಗಾರಿಕೆಗಳು ಬಳಕೆ ಮಾಡದ ಈ ಭೂಮಿಯನ್ನು ಎಂಆರ್‌ಪಿಎಲ್ ವಿಸ್ತರಣೆಗೆ ಬಳಸುವ ಅವಕಾಶವಿದ್ದರೂ ರೈತರಿಂದ ವಿನಾಕಾರಣ ಭೂಮಿ ಕಿತ್ತುಕೊಳ್ಳುವ ಯತ್ನ ನಡೆಸಲಾಗುತ್ತಿದೆ. ಎಂಆರ್‌ಪಿಎಲ್ ವಿಸ್ತರಣೆಗಾಗಿ ಕೆಐಎಡಿಬಿ ಕುತ್ತೆತ್ತೂರು ಮತ್ತು ಪೆರ್ಮುದೆ ಗ್ರಾಮಗಳಲ್ಲಿ 850 ಎಕರೆ ಭೂಮಿ ಸ್ವಾಧೀನ ಮಾಡಲು ನಿರ್ಧರಿಸಿದೆ. ಇದೇ ವೇಳೆ ಮಂಗಳೂರು ವಿಶೇಷ ಆರ್ಥಿಕ ವಲಯ ರೈತರಿಂದ ವಶಪಡಿಸಿಕೊಂಡಿರುವ ಜಮೀನಿನಲ್ಲಿ ಸುಮಾರು 750 ಎಕರೆಯಷ್ಟು ಜಾಗ ಇನ್ನೂ ಕೈಗಾರಿಕೆಗಳ ಸ್ಥಾಪನೆಯಾಗದೆ ಖಾಲಿ ಬಿದ್ದಿದೆ. ಆದರೂ ಕೆಐಎಡಿಬಿ ರಿಯಲ್ ಎಸ್ಟೇಟ್ ಮಾದರಿಯಲ್ಲಿ ಭೂಮಿ ವಶಪಡಿಸಿಕೊಳ್ಳುವ ಉದ್ದೇಶವೇನು ? ಎಂದು ವಿದ್ಯಾ ದಿನಕರ್ ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.
ಕೈಗಾರಿಕೆಗಾಗಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ಬಳಕೆ ಮಾಡಿದೆ ಉಳಿಸಿಕೊಂಡಿರುವ ಭೂಮಿ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗೆ ಜನವರಿಯಲ್ಲಿ ಸೂಚಿಸಿದ್ದೆ. ಆದರೆ ಈವರೆಗೂ ಜಿಲ್ಲಾಧಿಕಾರಿ ವರದಿ ನೀಡಿಲ್ಲ. ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಈ ಬಗ್ಗೆ ಸ್ಪಷ್ಟನೆ ಕೇಳುತ್ತೇನೆ. ತಕ್ಷಣ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಕೆಐಎಡಿಬಿ ಹಳೇ ಕಾಯ್ದೆಯನ್ನೇ ಭೂಸ್ವಾಧೀನಕ್ಕೆ ಬಳಸುತ್ತಿರುವುದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿಯೂ ಮುಖ್ಯಮಂತ್ರಿ ಭರವಸೆ ನೀಡಿದರು.
ನಿಯೋಗದಲ್ಲಿ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಲಾರೆನ್ಸ್ ಡಿಕುನ್ಹ, ರಾಮಚಂದ್ರ ಭಟ್, ಧೀರಜ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English