ಮಂಗಳೂರು : ಕಯ್ಯಾರರು ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆ ಗೊಳಿಸಲು ಪ್ರಯತ್ನ ಮಾಡಿದವರಲ್ಲಿ ಪ್ರಮುಖರು ಅವರು ಕೇವಲ ಕವಿ ಮಾತ್ರವಲ್ಲ ಬಹುಮುಖ ಪ್ರತಿಭೆ, ಸಾಹಿತಿ, ಕವಿ, ಸ್ವಾತಂತ್ರ್ಯ ಹೋರಾಟಗಾರ, ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಹೇಳಿದರು.
ಅವರು ನಗರದ ರಥಬೀದಿ ಬಿಇಎಂ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ದಿ. ಕಯ್ಯಾರ ಕಿಂಞಣ್ಣ ರೈಯವರ ಜನ್ಮದಿನದ ಸಮಾರಂಭದಲ್ಲಿ ಮಾತನಾಡಿ ಸಾಂಸ್ಕೃತಿಕ ಲೋಕದಲ್ಲಿ ಮೇರು ಸಾಧನೆಯನ್ನು ಮಾಡಿದವರು. ವಿಶಾಲ ಭಾರತದ ಕಲ್ಪನೆಯನ್ನು ಕಟ್ಟಿಕೊಂಡ ಮಹಾಕವಿ. ಕನ್ನಡ ಸಾರಸ್ವತ ಲೋಕದಲ್ಲಿ ಅವರ ಬದುಕು ಸಂಪೂರ್ಣವಾಗಿ ದೇಶಕ್ಕಾಗಿ ಸಮರ್ಪಣೆಗೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಚ್.ಚಂದ್ರಶೇಖರ ಕೆದ್ಲಾಯರಿಗೆ ದಿ. ಕಯ್ಯಾರ ಕಿಂಞಣ್ಣ ರೈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನೀಲ್, ಕವಿ ದಿ. ಕಯ್ಯಾರ ಕಿಂಞಣ್ಣ ರೈ ಅವರ ಸಾಧನೆಯನ್ನು ಮುಂದಿನ ಜನಾಂಗದವರಿಗೂ ತಿಳಿಸುವ ನಿಟ್ಟಿನಲ್ಲಿ ನಗರದ ರಸ್ತೆ ಅಥವಾ ವೃತ್ತಕ್ಕೆ ಅವರ ಹೆಸರನ್ನಿಡಲು ಮನವಿ ಬಂದರೆ, ಮುಂದಿನ ಪರಿಷತ್ ಸಭೆಯಲ್ಲಿ ಮಂಡಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
ಕಾರ್ಯಕ್ರಮ ಆಯೋಜಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಅಧ್ಯಕ್ಷತೆ ವಹಿಸಿದ್ದರು.
ಎಸ್.ವಿ. ಭಟ್, ನೀಲಾವರ ಸುರೇಂದ್ರ ಅಡಿಗ, ಕಳ್ಳಿಗೆ ತಾರನಾಥ ಶೆಟ್ಟಿ, ದುರ್ಗಾ ಪ್ರಸಾದ್ ರೈ, ಬಿಇಎಂ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯ ಸಂತೋಷ್, ತಾಲೂಕು ಕಸಾಪ ಅಧ್ಯಕ್ಷೆ ವಿಜಯಲಕ್ಷಿ ಬಿ. ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಯ್ಯಾರರ ಚಿತ್ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Click this button or press Ctrl+G to toggle between Kannada and English