ಮಂಗಳೂರು : ನಿರ್ಗಮನ ಕಮಿಷನರ್ ಚಂದ್ರಶೇಖರ್ ಅಧಿಕಾರ ಹಸ್ತಾಂತರಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂಗಳೂರು ನನಗೆ ಅಪರಿಚಿತ ಪ್ರದೇಶವಾದರೂ ಕಳೆದ ಒಂದುವರೆ ವರ್ಷದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದೇನೆ. ಈ ಸಮಯದಲ್ಲಿ ಅನೇಕ ಮಂದಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ್ದಾರೆ ಎಂದು ಹೇಳಿದರು.
ಅಧಿಕಾರ ಹಸ್ತಾಂತರಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಸೇವೆ ಸಲ್ಲಿಸಿರುವುದು ನನ್ನ ವೃತ್ತಿ ಜೀವನದ ಸ್ಮರಣೀಯ ಮತ್ತು ಸಂತೋಷದ ಸಂಗತಿಯಾಗಿದೆ. ಕೆಲವು ಪ್ರಮುಖ ಪ್ರಕರಣಗಳನ್ನು ಬಯಲಿಗೆಳೆಯಲು ಮಾಧ್ಯಮ ಸಹಿತ ಸಾರ್ವಜನಿಕರ ಸಹಕಾರ ಸ್ಮರಣೀಯ ಎಂದು ಚಂದ್ರಶೇಖರ್ ಹೇಳಿದರು.
ಮಂಗಳೂರು ನಗರ ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಪೊಲೀಸ್ ಇಲಾಖೆಯಾಗಿ ರೂಪಿಸಿದ ತೃಪ್ತಿ ಇದೆ. ಅದಕ್ಕಾಗಿ ‘ಫೋನ್ ಇನ್ ಕಾರ್ಯಕ್ರಮ’ವನ್ನು ಉತ್ತಮವಾಗಿ ಬಳಸಿಕೊಂಡೆ. ಉತ್ತಮ ಕೆಲಸ ಮಾಡಿದರೆ ಪ್ರೋತ್ಸಾಹ ಸಿಗುತ್ತದೆ ಎಂಬುದಕ್ಕೆ ಮಂಗಳೂರು ನಗರದ ಜನತೆ ಸಾಕ್ಷಿಯಾಗಿದೆ.
ಸಮಾಜ ಘಾತುಕ ಶಕ್ತಿಗಳು ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದಾಗ ವಾಸ್ತವ ಅರಿತುಕೊಂಡು ಬೆಂಬಲಿಸಿದ ಮಾಧ್ಯಮ ಮಿತ್ರರನ್ನು ಮರೆಯಲು ಅಸಾಧ್ಯ. ನಗರದ ಸಂಚಾರ ಸಮಸ್ಯೆ ಮತ್ತಿತರ ವಿಚಾರಕ್ಕೆ ಸಂಬಂಧಿಸಿ ಕಾಲಕಾಲಕ್ಕೆ ಸಲಹೆ, ಮಾರ್ಗದರ್ಶನ ನೀಡಿದ ಎಲ್ಲರನ್ನೂ ಈ ಸಂದರ್ಭ ಸ್ಮರಿಸುತ್ತೇನೆ ಎಂದರು.
ಡಿಸಿಪಿಗಳಾದ ಶಾಂತರಾಜು, ಹನುಮಂತರಾಯ ಮತ್ತಿತರ ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English