ಮಂಗಳೂರು : ರಾಜ್ಯ ಅರಣ್ಯ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ರಮಾನಾಥ್ ರೈ ಅವರು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರಿಗೆ ಸೂಚನೆ ನೀಡಿದ ಬೆನ್ನಲ್ಲೇ ಸಚಿವ ರಮಾನಾಥ್ ರೈಗೆ ಮುಂಬೈ ಯಿಂದ ಕೊಲೆ ಬೆದರಿಕೆಯ ಕರೆಯೊಂದು ಬಂದಿದೆ ಎನ್ನಲಾಗಿದೆ.
ರಮಾನಾಥ ರೈ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ರೈ ಅವರ ಮೊಬೈಲ್‍ಗೆ ಯಾವ ಸಂಖ್ಯೆಯಿಂದ, ಎಲ್ಲಿಂದ, ಯಾವ ಸಮಯದಲ್ಲಿ ಕರೆ ಬಂದಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ಸೋಮವಾರ ಬೆಳಿಗ್ಗೆ ಮುಂಬೈಯಿಂದ ವ್ಯಕ್ತಿಯೊಬ್ಬ ಸಚಿವರಿಗೆ ಕರೆ ಮಾಡಿ ಬೆದರಿಕೆಯೊಡ್ಡಿದ ಆಡಿಯೋ (ಧ್ವನಿಮುದ್ರಿಕೆ) ತುಳು ಭಾಷೆಯಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಲ್ಲಡ್ಕ ಪ್ರಭಾಕರ್ ಭಟ್ ಹಿಂದೂಗಳ ಶಕ್ತಿ. ಅವರನ್ನು ಬಂಧಿಸಲು ಹೇಳಿದ್ದು ಯಾಕೆ? ಹಿಂದೊಮ್ಮೆ ಸಚಿವ ಯು.ಟಿ.ಖಾದರ್ ಕೂಡಾ ಅವರ ಮೇಲೆ ಚಪ್ಪಲಿಯಲ್ಲಿ ಹಲ್ಲೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಕೇವಲ ಮುಸ್ಲಿಮರನ್ನು ಓಲೈಸಲು ಈ ರೀತಿಯ ತಂತ್ರ ಬಳಸುತ್ತಿದ್ದೀರಿ ಎಂದು ಗೊತ್ತಿದೆ. ನಿಮ್ಮನ್ನೆಲ್ಲಾ ಚುನಾವಣೆ ಸಂದರ್ಭ ನೋಡಿಕೊಳ್ಳುತ್ತೇನೆ. ಕೇವಲ ಆರು ತಿಂಗಳಲ್ಲಿ ಚುನಾವಣೆ ಬರಲಿದೆ ನೆನಪಿರಲಿ ಎಂದು ಬೆದರಿಕೆಯೊಡ್ಡಿದ್ದಾರೆ.
ಪ್ರಭಾಕರ್ ಭಟ್ ಹಿಂದು ಧರ್ಮಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅಂತಹ ವ್ಯಕ್ತಿ ಧರ್ಮ ಉಳಿಸಲು ಪ್ರಾಣವನ್ನು ಲೆಕ್ಕಿಸದೆ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಮ್ಮೆ ಅವರ ಬಗ್ಗೆ ಸುಳ್ಳು ಆರೋಪ ಮಾಡಿದರೆ ನಿಮ್ಮನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುವ ಬಗ್ಗೆ ದೂರು ನೀಡಲಾಗಿದೆ.
ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಕಳ್ಳ ಎಂದು ಕರೆಯಬೇಡಿ. ಅವರಿಗಾಗಿ ಇಡೀ ಹಿಂದೂ ಸಮಾಜ ಒಂದಾಗಲು ಸಜ್ಜಾಗಿದೆ. ಯಾರು, ಯಾವಾಗ ಜೈಲಿಗೆ ಹೋಗುತ್ತಾರೆ ಎಂಬುದನ್ನು ಕಾದು ನೋಡಿ. ಹಿಂದೂ ಧರ್ಮವನ್ನು ಅವಮಾನಿಸಿ ಮುಸ್ಲಿಮರ ವೋಟು ಪಡೆಯಬೇಕೆಂಬ ಒಂದೇ ಕಾರಣಕ್ಕಾಗಿ ಇಂತಹ ಹೇಳಿಕೆ ಕೊಟ್ಟಿದ್ದೀರಿ. ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಹೇಗೆ ಗೆಲ್ಲುತ್ತೀರಿ ನೋಡಿ ಎಂದು ಸವಾಲು ಹಾಕಿದ್ದಾನೆ ಎನ್ನಲಾಗಿದೆ..
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ನಡೆಯಲು ಯಾರ ಕುಮ್ಮಕ್ಕು ಇದೆ ಎಂಬುದು ನಿಮಗೆ ಗೊತ್ತು. ಆದರೂ ಒಂದು ಸಮುದಾಯವನ್ನು ಓಲೈಸಿಕೊಳ್ಳಲು ಈ ರೀತಿ ಆರೋಪ ಮಾಡುವುದಾಗಲಿ ಇಲ್ಲವೆ , ಸಂಘಟನೆಯ ಮುಖಂಡರ ವಿರುದ್ದ ಹಗುರವಾಗಿ ಮಾತನಾಡುವುದು ಸರಿಯಲ್ಲ. ಪದೇ ಪದೆ ಈ ರೀತಿ ಸುಳ್ಳು ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಈ ಅನಾಮಧೇಯ ವ್ಯಕ್ತಿ ಎಚ್ಚರಿಸಿದ್ದಾನೆ ಎನ್ನಲಾಗಿದೆ.
Click this button or press Ctrl+G to toggle between Kannada and English