ಯೋಗದಿಂದ ಆರೋಗ್ಯ, ಆಯುಷ್ಯ ವೃದ್ಧಿ ಟಿ. ಶ್ಯಾಮ್ ಭಟ್

5:19 PM, Wednesday, June 21st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

yoga ಉಜಿರೆ: ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಆರೋಗ್ಯ ರಕ್ಷಣೆಗೆ ಯೋಗ ಅಗತ್ಯ. ಯೋಗದಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ. ಎಲ್ಲರೂ ಶ್ರದ್ಧೆಯಿಂದ ನಿತ್ಯವೂ ಯೋಗಾಭ್ಯಾಸ ಮಾಡಬೇಕು ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಹೇಳಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಆಯೋಜಿಸಲಾದ ಮೂರನೇ ವಿಶ್ವಯೋಗ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದರು.
ಉತ್ತಮ ಜ್ಞಾನ, ಪ್ರೀತಿ-ವಿಶ್ವಾಸ ಮತ್ತು ನಿಸ್ಪೃಹ ಸೇವಾ ಮನೋಭಾವ ಹೊಂದಿದವರು ಪರಿಶುದ್ಧರಾಗುತ್ತಾರೆ. ಇಂದು ಆಧುನಿಕ ಜೀವನ ಶೈಲಿ, ಆಹಾರ ಸೇವನೆ ಹಾಗೂ ಸದಾ ಕೆಲಸದ ಒತ್ತಡದಿಂದಾಗಿ ಅನಾರೋಗ್ಯ ಎಲ್ಲರನ್ನೂ ಕಾಡುತ್ತಿದೆ. ಎಲ್ಲರೂ ನಿತ್ಯವೂ ಯೋಗಾಭ್ಯಾಸ ಮಾಡಿದಲ್ಲಿ ಕೆಲಸದಲ್ಲಿ ಕೌಶಲ ಸಾಧಿಸುವುದರೊಂದಿಗೆ ಆರೋಗ್ಯ ಭಾಗ್ಯ ಹೊಂದಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕೆನರಾ ಬ್ಯಾಂಕಿನ ಮಹಾ ಪ್ರಬಂಧಕ ರವೀಂದ್ರ ಭಂಡಾರಿ ಮಾತನಾಡಿ, ತಾನು ನಿತ್ಯವೂ ಯೋಗಾಭ್ಯಾಸ ಮಾಡುತ್ತಿದ್ದು ಆರೋಗ್ಯವಾಗಿದ್ದೇನೆ. ಕೆಲಸದ ಒತ್ತಡ ನಿವಾರಣೆಯಾಗಿ ಧನಾತ್ಮಕ ಚಿಂತನೆ ಬೆಳೆಯುತ್ತದೆ ಎಂದು ಸ್ವಾನುಭವ ವಿವರಿಸಿದರು.

yoga ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಬಿ. ವಸಂತ ಶೆಟ್ಟಿ ಶುಭಾಶಂಸನೆ ಮಾಡಿ ಸಮಾಜದ ಆರೋಗ್ಯ ಮತ್ತು ಅಭಿವೃದ್ಧಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ಮೂಲಕ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಅಭಿನಂದಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ನಿರ್ದೇಶಕ ಅರುಣ್ ಪೂಜಾರ್ ಮಾತನಾಡಿ, ಇಂದಿನ ಯುವ ಜನತೆ ದೇಶದ ಮುಂದಿನ ನಾಯಕರಾಗಿದ್ದು, ಯೋಗಾಭ್ಯಾಸದ ಮೂಲಕ ಆರೋಗ್ಯ ವರ್ಧನೆಯೊಂದಿಗೆ ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯೋಗದಿಂದ ವಿಶ್ವ ಶಾಂತಿ, ಭ್ರಾತೃತ್ವ: ವೀರೇಂದ್ರ ಹೆಗ್ಗಡೆ

ಯೋಗವು ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಯೋಗದ ಮೂಲ ಗುರು ಶಿವ. ಪತಂಜಲಿ ಮೂಲಕ ಯೋಗ ಸೂತ್ರಗಳು ರೂಪಿಸಲ್ಪಟ್ಟಿವೆ. ನಮ್ಮ ಆಯುಷ್ಯದ ಪ್ರತಿಯೊಂದು ಕ್ಷಣವನ್ನೂ ಸದುಪಯೋಗ ಮಾಡಬೇಕಾದರೆ ಆರೋಗ್ಯಪೂರ್ಣ ದೇಹ ಮತ್ತು ಮನಸ್ಸು ಇರಬೇಕು. ಇಂದು ಯಾವುದನ್ನು ಬೇಕಾದರೂ ಆನ್‌ಲೈನ್ ಮೂಲಕ ಖರೀದಿಸಬಹುದು. ಆದರೆ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ. ನಿತ್ಯವೂ ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ಇಂದ್ರಿಯಗಳ ನಿಯಂತ್ರಣವೂ ಆಗುತ್ತದೆ. ರಕ್ತದೊತ್ತಡ, ಮಧುಮೇಹದಿಂದ ಮುಕ್ತಿ ಹೊಂದಬಹುದು ಎಂದು ಅವರು ಹೇಳಿದರು.

ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದೊಂದಿಗೆ ಯೋಗದ ಮೂಲಕ ವಿಶ್ವಶಾಂತಿ, ಭ್ರಾತೃತ್ವ ಮೂಡಿ ಬರಲಿ. ಎಲ್ಲೆಲ್ಲೂ ಸುಖ-ಶಾಂತಿ ನೆಮ್ಮದಿ ನೆಲೆಸಲಿ ಎಂದು ಹೆಗ್ಗಡೆಯವರು ಹಾರೈಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English