ಮಂಗಳೂರು : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ. ರೋಡ್ ಶಾಖೆಯಲ್ಲಿ ಖದೀಮರ ತಂಡವೊಂದು ದರೋಡೆಗೆ ಯತ್ನಿಸಿದಾಗ, ಬ್ಯಾಂಕ್ ಸಿಬ್ಬಂದಿ ದರೋಡೆಕೋರರಿಗೆ ಕಲ್ಲು ಎಸೆದು ಓಡಿಸಿದ ಘಟನೆ ವರದಿಯಾಗಿದೆ.
ಇಬ್ಬರು ದರೋಡೆಕೋರರು ಹೆಲ್ಮೆಟ್ ಧರಿಸಿಕೊಂಡು ಬ್ಯಾಂಕ್ ಒಳಗೆ ಅಕ್ರಮವಾಗಿ ಪ್ರವೇಶಿಸಿ ಕರ್ತವ್ಯದಲ್ಲಿದ್ದ ಮೂವರು ಸಿಬ್ಬಂದಿಗಳಿಗೆ ಚೂರಿ ತೋರಿಸಿ ಬೆದರಿಸಿ ಅವರನ್ನು ಶೌಚಾಲಯದೊಳಗೆ ಕೂಡಿ ಹಾಕಿ ಚಿನ್ನಾಭರಣವನ್ನು ದೋಚಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಸುಮಾರು 20 ಕೆಜಿ ಚಿನ್ನವನ್ನು ಗೋಣಿ ಚೀಲದಲ್ಲಿ ತುಂಬಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭ ಶೌಚಾಲಯದಲ್ಲಿದ್ದ ಸಿಬ್ಬಂದಿಯೋರ್ವ ದರೋಡೆಕೋರರಿಗೆ ಕಲ್ಲು ಎಸೆದಿದ್ದು ಈ ಸಂದರ್ಭ ದರೋಡೆಕೋರರು ಚಿನ್ನ ತುಂಬಿಸಿದ್ದ ಗೋಣಿ ಚೀಲವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಡಿಸಿಪಿ ಹನುಮಂತ ರಾಯ, ಎಸಿಪಿ ಶೃತಿ ಹಾಗೂ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English