ಮ೦ಗಳೂರು : ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗಳಲ್ಲಿ ಹೆಸರು ಬಿಟ್ಟು ಹೋಗಿರುವವರ ಹಾಗೂ 18-21 ವರ್ಷ ಪ್ರಾಯ ತುಂಬಿರುವ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಗಳಲ್ಲಿ ನೋಂದಾಯಿಸುವ ಬಗ್ಗೆ ವಿಶೇಷ ಆಂದೋಲನವನ್ನು ಜುಲೈ 1ರಿಂದ 31ರವರೆಗೆ ಹಮ್ಮಿಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಪಡೆದ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 01.01.17 ರ ಅರ್ಹತಾ ದಿನಾಂಕದಂತೆ ಈಗಾಗಲೇ ತಯಾರಿಸಿ ಪ್ರಕಟ ಪಡಿಸಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ವಿಶೇಷ ಆಂದೋಲನ ಏರ್ಪಡಿಸಿದೆ. ವಿಶೇಷವಾಗಿ 18-19 ವಯಸ್ಸಿನ ಅರ್ಹತಾ ಮತದಾರರನ್ನು, ಮತದಾರರ ಪಟ್ಟಿಗೆ ಸೇರ್ಪಡೆಯನ್ನು ಹೆಚ್ಚಿಸುವುದು ಇದರ ಉದ್ದೇಶ. ಅದರಂತೆ 18 ರಿಂದ 19 ವರ್ಷಗಳ ಮತದಾರರ ಲಿಂಗ ಅನುಪಾತವು 2011ರ ಜನಗಣತಿ ದಾಖಲಾತಿ ಹೊಂದಾಣಿಕೆಯಾಗಬೇಕು. ಮೃತ ಪಟ್ಟ/ವಲಸೆ ಹೋದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದು, ತಿದ್ದುಪಡಿ, ಒಂದು ಬೂತ್‌ನಿಂದ ಇನ್ನೊಂದಕ್ಕೆ ವರ್ಗಾವಣೆ ಮತ್ತಿತರ ಕಾರ್ಯಗಳನ್ನು ಈ ವಿಶೇಷ ಆಂದೋಲನದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಅರ್ಹರು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಚುನಾವಣಾ ಅಧಿಕಾರಿಯಾಗಿರುವ ಅಂಗನವಾಡಿ ಕಾರ್ಯಕರ್ತೆ/ಶಿಕ್ಷಕರು/ಗ್ರಾಮಕರಣಿಕರನ್ನು ಜುಲೈ ತಿಂಗಳಲ್ಲಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಜುಲೈ 9 ಮತ್ತು 23 ರಂದು ತಿಂಗಳಲ್ಲಿ ಜಿಲ್ಲೆಯ ಪ್ರತಿಯೊಂದು ಮತಗಟ್ಟೆಗಳಲ್ಲಿ ಬೂತು ಮಟ್ಟದ ಅಧಿಕಾರಿಯವರು ನಿಗಧಿ ಪಡಿಸಿದ ನಮೂನೆ-6,7,8 ಮತ್ತು 8ಎ ಯೊಂದಿಗೆ ಉಪಸ್ಥಿತರಿರುವರು. ಈ ಅವಧಿಯಲ್ಲಿ ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಲ್ಪಡದ ಸಾರ್ವಜನಿಕರು ಕ್ರಮವಾಗಿ ನಿಗಧಿ ಪಡಿಸಿದ ನಮೂನೆ-6ನ್ನು ಪಡೆದು ಭರ್ತಿ ಮಾಡಿ ನೀಡುವುದು. ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲ್ಪಟ್ಟ ವ್ಯಕ್ತಿಯು ಮೃತ ಪಟ್ಟಲ್ಲಿ/ವಲಸೆ ಹೋದಲ್ಲಿ ನಮೂನೆ-7ನ್ನು ಭರ್ತಿ ಮಾಡಿ ಸಲ್ಲಿಸುವುದು. ಮತದಾರರ ಪಟ್ಟಿಗಳಲ್ಲಿ ನೋಂದಾಯಿಸಲ್ಪಟ್ಟ ಹೆಸರು ಇತ್ಯಾದಿ ದಾಖಲಾತಿಗಳ ತಿದ್ದುಪಡಿ ಅವಶ್ಯವಿದ್ದಲ್ಲಿ ನಮೂನೆ-೮ನ್ನು ಭರ್ತಿ ಮಾಡಿ ಸಲ್ಲಿಸುವುದು. ಅಲ್ಲದೆ ಒಂದು ವಿಧಾನ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮನೆ ಬದಲಾವಣೆ ಮಾಡಿದಲ್ಲಿ ನಮೂನೆ-8ಎ ಯನ್ನು ಭರ್ತಿ ಮಾಡಿ ಸಲ್ಲಿಸಬಹುದು.
ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದ್ದು, ಅಲ್ಲದೆ ದಿ:01.01.2017 ರಂದು 18 ವರ್ಷ ಪ್ರಾಯ ತುಂಬಿದವರು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಬಿಟ್ಟು ಹೋದವರು ತಮ್ಮ ಹೆಸರನ್ನು ಮತದಾರರ ಪಟ್ಟಿಗಳಲ್ಲಿ ನೋಂದಾಯಿಸುವ ಬಗ್ಗೆ ಆನ್ ಲೈನ್ ಮೂಲಕ ನಿಗಧಿ ಪಡಿಸಿದ ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಂಡು ceokarnataka.kar.nic.in ಟಿ ವೆಬ್‌ಸೈಟ್ ಸಂಪರ್ಕಿಸಿ ಮನವಿ ಸಲ್ಲಿಸಬಹುದು.
ಮತದಾರರ ಪಟ್ಟಿಗಳಲ್ಲಿ ಮುದ್ರಿಸಲ್ಪಟ್ಟ ಮತದಾರರ ಭಾವಚಿತ್ರವು ಉತ್ತಮ ಗುಣಮಟ್ಟದಿಂದ ಮೂಡಿ ಬರದಿದ್ದಲ್ಲಿ ಮತದಾರರು ತಮ್ಮ ಇತ್ತೀಚಿನ ಬಣ್ಣದ ಪಾಸ್ ಪೋರ್ಟು ಗಾತ್ರದ ಭಾವಚಿತ್ರವನ್ನು ಸಂಬಂಧಪಟ್ಟ ತಹಶೀಲ್ದಾರರಿಗೆ ನೀಡಿ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಪರಿಣಾಮಕಾರಿಯಾಗಿ ನಡೆಸುವ ಬಗ್ಗೆ ಪ್ರತಿಯೊಂದು ಮತಗಟ್ಟೆಗಳಿಗೆ ತಮ್ಮ ಪಕ್ಷದ ವತಿಯಿಂದ ಬೂತು ಮಟ್ಟದ ಅಧಿಕಾರಿಯವರನ್ನು ನೇಮಕ ಮಾಡಿಕೊಂಡು ಮತದಾರರ ಪಟ್ಟಿಗಳಲ್ಲಿ ಮೃತಪಟ್ಟ ಮತ್ತು ವಲಸೆ ಹೋದ ಮತದಾರರ ಹೆಸರನ್ನು ತೆಗೆದು ಹಾಕುವ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಕುಮಾರ್ ತಿಳಿಸಿದರು.
ಅದೇ ರೀತಿ ಮತದಾರರ ಪಟ್ಟಿಗಳಲ್ಲಿ ಈ ತನಕ ಹೆಸರು ನೋಂದಾಯಿಸದಿರುವ ಹಾಗೂ 18 ವರ್ಷ ಪ್ರಾಯ ತುಂಬುವ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಗಳಲ್ಲಿ ನೋಂದಾಯಿಸುವ ಬಗ್ಗೆ ಹಾಗೂ ಅವರಿಗೆ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆಯುವ ಬಗ್ಗೆ ಬೂತು ಮಟ್ಟದ ಅಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ.
ದಿನಾಂಕ: 01.01.2017 ರಂದು ಅಂತಿಮವಾಗಿ ಪ್ರಕಟ ಪಡಿಸಲ್ಪಟ್ಟ ಜಿಲ್ಲೆಯ ಮತದಾರರ ಪಟ್ಟಿಗಳಲ್ಲಿ 807529 ಪುರುಷರು ಮತ್ತು 829815 ಮಹಿಳೆಯರು ಸೇರಿದಂತೆ ಒಟ್ಟು 1637344 ಮತದಾರರ ಹೆಸರು ನೋಂದಾಯಿಸಲ್ಪಟ್ಟಿರುತ್ತದೆ ಮತದಾರರ ಪಟ್ಟಿಗಳಲ್ಲಿ ಹೆಸರು ಬಿಟ್ಟು ಹೋಗಿರುವವರ ಹಾಗೂ 18-21 ವರ್ಷ ಪ್ರಾಯ ತುಂಬಿರುವ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಗಳಲ್ಲಿ ನೋಂದಾಯಿಸುವ ಬಗ್ಗೆ ದಿ:01.07.2017 ರಿಂದ 31.07.2017 ರ ಅವಧಿಯಲ್ಲಿ ಹಮ್ಮಿಕೊಂಡಿರುವ ವಿಶೇಷ ಆಂದೋಲನವನ್ನು ಪರಿಣಾಮಕಾರಿಯಾಗಿ ನಡೆಸುವ ಬಗ್ಗೆ ಜಿಲ್ಲಾಡಳಿತದೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ಮಾಣಿಕ್ಯ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English